ಮಂಗಳೂರು: ಬಜಪೆ ಪಟ್ಟಣ ಪಂಚಾಯತ್‌ಗೆ ನಡೆದ ಪ್ರಥಮ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಜಯ ಸಾಧಿಸಿದೆ. 2021ರಲ್ಲಿ ಬಜಪೆ ಹಾಗೂ ಮಳವೂರು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ರಚಿಸಲಾದ ಬಜಪೆ ಪಟ್ಟಣ ಪಂಚಾಯಿತಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ.
ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಪಕ್ಷ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಎಸ್‌ಡಿಪಿಐ 3 ಸ್ಥಾನಗಳನ್ನು ಪಡೆದುಕೊಂಡಿದೆ. ಪಕ್ಷೇತರ ಅಭ್ಯರ್ಥಿಗಳು 1 ಸ್ಥಾನದಲ್ಲಿ ಜಯಗಳಿಸಿದ್ದಾರೆ. ಈ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಪಟ್ಟಣ ಪಂಚಾಯತ್ ಆಡಳಿತದ ಹಿಡಿತ ಸಾಧಿಸಿದೆ.
ಇದನ್ನೂ ಓದಿ: ಮಂಕಿ ಪಟ್ಟಣ ಪಂಚಾಯತ್ ಬಿಜೆಪಿ ಪಾಲು
ಬುಧವಾರ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಬಜಪೆ ಪಟ್ಟಣ ಪಂಚಾಯಿತಿಯ 19 ವಾರ್ಡ್‌ಗಳಿಗೆ ಒಟ್ಟು 59 ಅಭ್ಯರ್ಥಿಗಳು ಕಣದಲ್ಲಿದ್ದರು. ಡಿಸೆಂಬರ್ 21ರಂದು ನಡೆದ ಮತದಾನದಲ್ಲಿ ಬಜಪೆಯಲ್ಲಿ ಶೇ.64ರಷ್ಟು ಮತದಾನ ದಾಖಲಾಗಿತ್ತು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಬಿಜೆಪಿ ಗೆಲುವು: ಇದೇ ವೇಳೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶವೂ ಪ್ರಕಟವಾಗಿದ್ದು, ಅಲ್ಲಿ ಕೂಡ ಬಿಜೆಪಿ ಮುನ್ನಡೆ ಸಾಧಿಸಿದೆ. ಒಟ್ಟು 18 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದುಕೊಂಡಿದೆ. ಕಿನ್ನಿಗೋಳಿಯಲ್ಲಿ 42 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇಲ್ಲಿ ಶೇ.69.36ರಷ್ಟು ಮತದಾನವಾಗಿದೆ.
ಇದನ್ನೂ ಓದಿ: ರಬಕವಿ-ಬನಹಟ್ಡಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ ಹುಲಜತ್ತಿ ಬದಲು ಸುರೇಶ ಪಾಟೀಲ ನೇಮಕ
ಕಿನ್ನಿಗೋಳಿ, ಮೆನ್ನಬೆಟ್ಟು ಹಾಗೂ ಕಟೀಲು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ 2021ರಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯನ್ನು ರಚಿಸಲಾಗಿತ್ತು. ಬಜಪೆ ಹಾಗೂ ಕಿನ್ನಿಗೋಳಿ ಎರಡೂ ಪಟ್ಟಣ ಪಂಚಾಯಿತಿಗಳು 2021ರಲ್ಲಿ ರಚನೆಯಾಗಿದ್ದರೂ, ಇದೀಗ ಮೊದಲ ಬಾರಿಗೆ ಚುನಾವಣೆ ಎದುರಿಸಿವೆ.
ಎರಡು ಹೊಸ ಪಟ್ಟಣ ಪಂಚಾಯಿತಿಗಳಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ತೋರಿರುವುದು ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ, ವಿಜಯೋತ್ಸವ ಆಚರಿಸಿದರು.























