Home ನಮ್ಮ ಜಿಲ್ಲೆ ಬಾಗಲಕೋಟೆ ರಬಕವಿ-ಬನಹಟ್ಡಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ ಹುಲಜತ್ತಿ ಬದಲು ಸುರೇಶ ಪಾಟೀಲ ನೇಮಕ

ರಬಕವಿ-ಬನಹಟ್ಡಿ ಪ್ರಾಧಿಕಾರ ಅಧ್ಯಕ್ಷ ದಿಢೀರ್ ಬದಲಾವಣೆ ಹುಲಜತ್ತಿ ಬದಲು ಸುರೇಶ ಪಾಟೀಲ ನೇಮಕ

0
19

ರಬಕವಿ–ಬನಹಟ್ಟಿ: ರಬಕವಿ–ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ ದಿಢೀರ್ ಬದಲಾವಣೆ ನಡೆದಿದೆ. ಕಳೆದ ಸೆಪ್ಟೆಂಬರ್ 30ರಂದು ಅಧ್ಯಕ್ಷರಾಗಿ ನೇಮಕಗೊಂಡಿದ್ದ ದಾನಪ್ಪ ಹುಲಜತ್ತಿಯವರನ್ನು ಸ್ಥಾನದಿಂದ ತೆರವುಗೊಳಿಸಿ, ಅವರ ಬದಲಾಗಿ ಸುರೇಶ ಪಾಟೀಲರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೂತನ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಈ ನೇಮಕ ಜಾರಿಯಲ್ಲಿರಲಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿಢೀರ್ ಬದಲಾವಣೆ: ಈ ಬದಲಾವಣೆ ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕಾಗಿ ಆರಂಭದಿಂದಲೂ ಪಕ್ಷದ ಒಳಗಡೆಯೇ ವಿರೋಧ, ಅಸಮಾಧಾನ ಮತ್ತು ಒತ್ತಡಗಳು ವ್ಯಕ್ತವಾಗಿದ್ದವು. ಕ್ಷೇತ್ರದ ವಿವಿಧ ಮುಖಂಡರು ಮತ್ತು ಕಾರ್ಯಕರ್ತರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿದ್ದರೂ, ಸೆಪ್ಟೆಂಬರ್ 30ರಂದು ದಾನಪ್ಪ ಹುಲಜತ್ತಿಯವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ಇದನ್ನೂ ಓದಿ: ವಿಜಯ್ ಹಜಾರೆ ನಾಳೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರ

ಮೂರು ತಿಂಗಳಲ್ಲಿ ಇಬ್ಬರು: ಕ್ಷೇತ್ರದ ನಾಯಕರು ಮತ್ತು ಕಾರ್ಯಕರ್ತರ ಒಮ್ಮತದ ನಿರ್ಣಯದ ಹಿನ್ನೆಲೆಯಲ್ಲಿ ಡಿಸೆಂಬರ್ 23ರಂದು ಸುರೇಶ ಪಾಟೀಲರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಕೇವಲ ಮೂರು ತಿಂಗಳ ಅವಧಿಯಲ್ಲಿ ಇಬ್ಬರು ಅಧ್ಯಕ್ಷರು ಬದಲಾಗಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಈ ಹಿಂದೆ ಅಧ್ಯಕ್ಷ ಸ್ಥಾನಕ್ಕಾಗಿ ಸುರೇಶ ಪಾಟೀಲ, ಶಂಕರ ಕೆಸರಗೊಪ್ಪ ಹಾಗೂ ದಾನಪ್ಪ ಹುಲಜತ್ತಿಯವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಮಾಜಿ ಸಚಿವೆ ಉಮಾಶ್ರೀ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದ ದಾನಪ್ಪ ಹುಲಜತ್ತಿ ಮೊದಲಿಗೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದರು. ಇದೀಗ ದಿಢೀರ್ ಬದಲಾವಣೆಯ ಮೂಲಕ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಬಳಗಕ್ಕೆ ಸೇರಿದ ಸುರೇಶ ಪಾಟೀಲರಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಕಾಳಿ ಎದುರು ಕುಣಿದ ಗೂಳಿ ಮಾರ್ಕಂಡೇಯ ಕಿಚ್ಚ ಸುದೀಪ್

ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, “ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಪಾಟೀಲರನ್ನೇ ನೇಮಕ ಮಾಡಬೇಕೆಂಬುದು ಪಕ್ಷದ ಸರ್ವಾನುಮತದ ಅಭಿಪ್ರಾಯವಾಗಿತ್ತು. ಆ ಹಿನ್ನೆಲೆಯಲ್ಲಿ ಈಗಿರುವ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ,” ಎಂದು ತಿಳಿಸಿದರು.

ನೂತನ ಅಧ್ಯಕ್ಷ ಸುರೇಶ ಪಾಟೀಲ ಅವರು, “ಪಕ್ಷದ ಶಿಸ್ತಿನ ಸಿಪಾಯಿಯಾಗಿ ದುಡಿದ ಫಲವಾಗಿ ಈ ಜವಾಬ್ದಾರಿ ಸಿಕ್ಕಿದೆ. ಎಲ್ಲ ಕಾರ್ಯಕರ್ತರು ಮತ್ತು ನಾಯಕತ್ವಕ್ಕೆ ಧನ್ಯವಾದಗಳು,” ಎಂದು ಹೇಳಿದರು.

ಇನ್ನು ನಿಕಟಪೂರ್ವ ಅಧ್ಯಕ್ಷ ದಾನಪ್ಪ ಹುಲಜತ್ತಿ ಅವರು, “ಪಕ್ಷ ನನಗೆ ನೀಡಿದ ಅವಕಾಶದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾವುದೇ ಅಸಮಾಧಾನ ಅಥವಾ ವಿರೋಧವಿಲ್ಲ. ಮುಂದೆಯೂ ಪಕ್ಷದ ಸಿದ್ಧಾಂತ ಮತ್ತು ನಿರ್ಧಾರಗಳಿಗೆ ಬದ್ಧನಾಗಿರುತ್ತೇನೆ,” ಎಂದು ಪ್ರತಿಕ್ರಿಯಿಸಿದರು.