ಚಿತ್ರದುರ್ಗ: ಮಹಾತ್ಮ ಗಾಂಧೀಜಿ ಅವರನ್ನು ಬಿಜೆಪಿ ಎಂದಿಗೂ ಒಪ್ಪಿಲ್ಲ, ಒಪ್ಪುವುದೂ ಇಲ್ಲ. ಆದ್ದರಿಂದ ನರೇಗಾ ಯೋಜನೆಯಿಂದ ಗಾಂಧೀಜಿ ಹೆಸರು ಕೈಬಿಟ್ಟಿರುವುದರಲ್ಲಿ ಅಚ್ಚರಿ ಏನಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯ್ನಾಡು ನೆಲದಲ್ಲಿ ರಾಷ್ಟ್ರಪಿತನನ್ನು ವಿರೋಧಿಸುತ್ತಾರೆ, ಅವರ ಹೆಸರನ್ನೇ ಯೋಜನೆಗಳಿಂದ ಕೈಬಿಡುತ್ತಾರೆ. ಅದೇ ವಿದೇಶಕ್ಕೆ ತೆರಳಿದಾಗ ಕೈಯಲ್ಲಿ ಚರಕ ಹಿಡಿದುಕೊಂಡು, ಮಹಾತ್ಮನ ಪ್ರತಿಮೆಗೆ ಪುಷ್ಪಗೌರವ ಸಲ್ಲಿಸುವ ನಾಟಕ ಮಾಡ್ತಾರೆ ಎಂದು ದೂರಿದರು.
ಕೆನಡಾ, ಸಿಂಗಾಪುರ ತಮ್ಮ ದೇಶದ ಜನರಿಗೆ ಭಾರತಕ್ಕೆ ತೆರಳದಂತೆ ಸೂಚಿಸುತ್ತಿವೆ. ಈ ಕುರಿತು ಚರ್ಚಿಸಿದ ನರೇಂದ್ರ ಮೋದಿ, ವಂದೇ ಮಾತರಂ ಸೇರಿ ವಿವಿಧ ವಿಷಯಗಳನ್ನು ಮುನ್ನೆಲೆಗೆ ತಂದು ದೇಶದ ಸಮಸ್ಯೆಗಳನ್ನು ಮರೆಮಾಚುತ್ತಿದ್ದಾರೆ ಎಂದರು.
ನಮಗೆ ಯಾರು ಹೈಕಮಾಂಡ್ ಎಂಬುದು ಗೊತ್ತಿದೆ. ಬೇರೆಯವರಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ರಾಜ್ಯದಲ್ಲಿ ಅಭಿವೃದ್ಧಿ ನಿಷ್ಕ್ರಿಯ ಎಂದಿರುವ ಬಿ. ವೈವಿಜಯೇಂದ್ರ, ದೆಹಲಿಯಲ್ಲಿನ ವಾತಾವರಣ ಹೇಗಿದೆ ಎಂದು ಮಾತನಾಡಲಿ ಎಂದು ತಿರುಗೇಟು ನೀಡಿದರು.























