ಸಂ. ಕ. ಸಮಾಚಾರ, ಮಂಗಳೂರು: ಬಾಂಗ್ಲಾ ಪ್ರಜೆಗೆ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (Pಅಅ) ಪಡೆಯಲು ನೆರವಾದ ವಿಟ್ಲ ಪೊಲೀಸ್ ಠಾಣಾ ಪೇದೆ ಹಾಗೂ ಅರ್ಜಿದಾರನ್ನು ಪೊಲೀಸರು ಬಂಧಿಸಿದ್ದಾರೆ.
ಶಕ್ತಿದಾಸ್ ಎಂಬ ವ್ಯಕ್ತಿಯು 2025ರ ಫೆಬ್ರವರಿ ತಿಂಗಳಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆಗ ಪೊಲೀಸ್ ಪರಿಶೀಲನೆ ನಡೆಸಿದಾಗ ವಿಳಾಸ ತಾಳೆಯಾಗದ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿತ್ತು (ಆದರೆ, ಜೂನ್ ತಿಂಗಳಲ್ಲಿ ಶಕ್ತಿದಾಸ್ ಮತ್ತೆ ಮರು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ವಿಜಯ್ ಹಜಾರೆ ನಾಳೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರ
ಈ ಸಂದರ್ಭದಲ್ಲಿ ವಿಟ್ಲ ಠಾಣೆಯ ಪೇದೆ ಪ್ರದೀಪ್, ಸಂಬಂಧಪಟ್ಟ ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಅವರ ಗಮನಕ್ಕೆ ತರದೇ, ಅವರ ಹೆಸರಿನಲ್ಲೇ ನಕಲಿ ವರದಿ ಸಿದ್ಧಪಡಿಸಿದ್ದರು. ಸಾಬು ಮಿರ್ಜಿ ಅವರ ಸಹಿಯನ್ನು ಫೋರ್ಜರಿ ಮಾಡಿ, ಮೇಲಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿ ಕೇಂದ್ರ ಕಚೇರಿಗೆ ಕಳುಹಿಸಿಕೊಟ್ಟಿದ್ದರು.
ಈ ಮೂಲಕ ಅರ್ಜಿದಾರನಿಗೆ ಪಾಸ್‌ಪೋರ್ಟ್ ಮತ್ತು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಗುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಈ ಅಕ್ರಮ ಬಯಲಾಗಬಾರದೆಂಬ ಉದ್ದೇಶದಿಂದ ಮೂಲ ದಾಖಲೆಗಳನ್ನು ನಾಶಪಡಿಸಲಾಗಿತ್ತು.
ಇದನ್ನೂ ಓದಿ: ಸಿಎಂ,ಡಿಸಿಎಂ ಕುರ್ಚಿ ಕಚ್ಚಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತ : ಶೋಭಾ ಕರಂದಾಜ್ಲೆ
ಡಿ.19ರಂದು ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದಾಗ ಈ ನಕಲಿ ಸಹಿ ಮತ್ತು ದಾಖಲೆ ನಾಶದ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಇಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ. ಆರೋಪಿ ಪೊಲೀಸ್ ಸಿಬ್ಬಂದಿ ಪ್ರದೀಪ್ನನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.























