ಜಿಪಂ ಯೋಜನಾ ನಿರ್ದೇಶಕರ ಮನೆ, ಕಚೇರಿ ಮೇಲೆ ಲೋಕಾ ದಾಳಿ

0
5

ಬಾಗಲಕೋಟೆ: ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಎಸ್.ಎಂ. ಕಾಂಬಳೆ ಅವರ ಜಿಲ್ಲಾಡಳಿತ ಭವನದಲ್ಲಿನ ಕಚೇರಿ ಹಾಗೂ ಗದಗ ಜಿಲ್ಲೆಯ ನರಗುಂದದಲ್ಲಿರುವ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ, ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿರುವ ಅವರ ಕಚೇರಿ ಹಾಗೂ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿರುವ ಅವರ ನಿವಾಸದ ಮೇಲೆ ಶನಿವಾರ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಡಿವೈಎಸ್ಪಿ ಪಿ. ಸುರೇಶ್ ರೆಡ್ಡಿ ಅವರ ನೇತೃತ್ವದ ತಂಡ ಈ ದಾಳಿಯನ್ನು ನಡೆಸಿದ್ದು, ಕಚೇರಿ ಮತ್ತು ಮನೆಗಳಲ್ಲಿ ದಾಖಲೆಗಳ ಶೋಧ ಕಾರ್ಯದಲ್ಲಿ ತೊಡಗಿದೆ. ಆಸ್ತಿ ದಾಖಲೆಗಳು, ಬ್ಯಾಂಕ್ ವ್ಯವಹಾರಗಳು, ಹೂಡಿಕೆಗಳಿಗೆ ಸಂಬಂಧಿಸಿದ ಕಡತಗಳು ಹಾಗೂ ಇತರೆ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಎಇಇ ಮನೆ ಮೇಲೆ ಲೋಕಾ ದಾಳಿ

ಪ್ರಾಥಮಿಕ ಮಾಹಿತಿಯಂತೆ, ಎಸ್.ಎಂ. ಕಾಂಬಳೆ ಅವರು ತಮ್ಮ ಸೇವಾವಧಿಯಲ್ಲಿ ಹೊಂದಿರುವ ಆಸ್ತಿಗಳು ಅವರ ತಿಳಿದ ಆದಾಯ ಮೂಲಗಳಿಗೆ ಹೋಲಿಸಿದರೆ ಹೆಚ್ಚು ಎನ್ನುವ ದೂರಿನ ಮೇರೆಗೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿಯ ವೇಳೆ ಸಿಕ್ಕಿರುವ ದಾಖಲೆಗಳು ಮತ್ತು ಮಾಹಿತಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್

ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳ ಚಲನವಲನ ಹೆಚ್ಚಾಗಿದೆ. ದಾಳಿ ಇನ್ನೂ ಮುಂದುವರಿದಿದ್ದು, ಸಂಪೂರ್ಣ ಪರಿಶೀಲನೆ ಬಳಿಕ ಲೋಕಾಯುಕ್ತ ಇಲಾಖೆ ಅಧಿಕೃತ ಮಾಹಿತಿ ಪ್ರಕಟಿಸುವ ನಿರೀಕ್ಷೆಯಿದೆ.

Previous articleಬೆಳ್ಳಂಬೆಳಗ್ಗೆ ಎಇಇ ಮನೆ ಮೇಲೆ ಲೋಕಾ ದಾಳಿ