ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ ಅವರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವಾಕ್ಸಮರ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಸುದೀಪ್ ಅವರು ಇತ್ತೀಚೆಗೆ ನೀಡಿದ್ದ “ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ, ನಾನೂ ರೆಡಿ” ಎಂಬ ಹೇಳಿಕೆ.
ಈ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಅವರು “ದರ್ಶನ್ ಇಲ್ಲದ ಸಮಯದಲ್ಲಿ ಕೆಲವರು ವೇದಿಕೆ ಮೇಲೆ ಏನೇನೋ ಮಾತನಾಡುತ್ತಾರೆ” ಎಂದು ಕಿಡಿ ಕಾರಿದ್ದರು. ಈ ಬೆಳವಣಿಗೆಗಳು ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವೆ ಕಿಡಿ ಹೊತ್ತಿಸಿವೆ. ಈ ಗೊಂದಲಗಳಿಗೆ ಈಗ ಸ್ವತಃ ಕಿಚ್ಚ ಸುದೀಪ್ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ.
ನಾನು ಹೇಳಿದ್ದು ವ್ಯಕ್ತಿಗಳ ಬಗ್ಗೆ ಅಲ್ಲ!: ಹುಬ್ಬಳ್ಳಿಯಲ್ಲಿ ತಾವು ನೀಡಿದ್ದ ಹೇಳಿಕೆಯ ಬಗ್ಗೆ ಸುದೀಪ್ ಸ್ಪಷ್ಟವಾಗಿ ಮಾತನಾಡಿದ್ದಾರೆ. ನಾನು ಯುದ್ಧದ ಬಗ್ಗೆ ಮಾತನಾಡಿದ್ದು ಯಾವುದೇ ವ್ಯಕ್ತಿ ಅಥವಾ ನಟನ ವಿರುದ್ಧವಲ್ಲ. ಚಿತ್ರರಂಗಕ್ಕೆ ದೊಡ್ಡ ಶಾಪವಾಗಿ ಪರಿಣಮಿಸಿರುವ ‘ಪೈರಸಿ’ ಎಂಬ ಪಿಡುಗಿನ ವಿರುದ್ಧ.
ನಮ್ಮ ಚಿತ್ರಗಳನ್ನು ಪೈರಸಿ ಮಾಡಲು ಒಂದು ದೊಡ್ಡ ಜಾಲವೇ ಸಿದ್ಧವಾಗಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿತ್ತು. ನನ್ನ ಶ್ರಮದ ಸಿನಿಮಾವನ್ನು ರಕ್ಷಿಸಿಕೊಳ್ಳುವುದು ನನ್ನ ಜವಾಬ್ದಾರಿ. ಹಾಗಾಗಿ, ಪೈರಸಿ ಮಾಡುವವರ ವಿರುದ್ಧ ಹೋರಾಡಲು ನಾವು ಸಿದ್ಧ ಎಂದು ಹೇಳಿದ್ದೆನೇ ಹೊರತು, ಅದು ಬೇರೆ ಯಾರಿಗೂ ಉದ್ದೇಶಿಸಿದ್ದಲ್ಲ ಎಂದು ಕಿಚ್ಚ ವಿವರಿಸಿದ್ದಾರೆ.
ವಿಜಯಲಕ್ಷ್ಮಿ ಮಾತಿಗೆ ಸುದೀಪ್ ಪ್ರತಿಕ್ರಿಯೆ: ವಿಜಯಲಕ್ಷ್ಮಿ ದರ್ಶನ್ ಪರೋಕ್ಷ ಟೀಕೆಗಳ ಬಗ್ಗೆಯೂ ಸುದೀಪ್ ಗೌರವಯುತವಾಗಿಯೇ ಉತ್ತರಿಸಿದ್ದಾರೆ. “ನಾನು ವಿಜಯಲಕ್ಷ್ಮಿ ಅವರ ಯಾವುದೇ ವಿಡಿಯೋ ಅಥವಾ ಆಡಿಯೋ ನೋಡಿಲ್ಲ. ಅವರು ನನ್ನ ಹೆಸರನ್ನೇ ಎತ್ತಿ ಮಾತನಾಡದ ಮೇಲೆ, ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ.
ಒಂದು ವೇಳೆ ಅವರು ನೇರವಾಗಿ ನನ್ನ ಹೆಸರನ್ನೇ ಹೇಳಿದ್ದರೆ ಖಂಡಿತ ಉತ್ತರ ಕೊಡುತ್ತಿದ್ದೆ. ಯಾವುದೋ ವೇದಿಕೆಯಲ್ಲಿ ಯಾರೋ ಮಾತನಾಡಿದ್ದನ್ನು ನನಗೆ ಅನ್ವಯಿಸುವುದು ತಪ್ಪು. ಅವರ ಜೀವನದಲ್ಲೂ ಸಾಕಷ್ಟು ಏರಿಳಿತಗಳು ನಡೆಯುತ್ತಿವೆ, ಅವರ ಬಗ್ಗೆ ನಮಗೆ ಗೌರವವಿದೆ” ಎಂದಿದ್ದಾರೆ.
ಅಭಿಮಾನಿಗಳಲ್ಲಿ ಗೊಂದಲ ಬೇಡ: ದರ್ಶನ್ ಮತ್ತು ಸುದೀಪ್ ನಡುವೆ ಮೊದಲಿನಿಂದಲೂ ಸ್ನೇಹವಿತ್ತು. ಆದರೆ ಇತ್ತೀಚಿನ ಘಟನೆಗಳಿಂದ ಅಭಿಮಾನಿಗಳು ಹಾದಿ ತಪ್ಪುತ್ತಿದ್ದಾರೆ ಎಂದು ಸುದೀಪ್ ಕಳವಳ ವ್ಯಕ್ತಪಡಿಸಿದ್ದಾರೆ.
“ನಾನು ನೇರ ನಡೆ-ನುಡಿಯ ವ್ಯಕ್ತಿ. ಯಾರ ಬಗ್ಗೆಯಾದರೂ ಹೇಳಬೇಕೆಂದರೆ ನೇರವಾಗಿಯೇ ಹೇಳುತ್ತೇನೆ. ಪರೋಕ್ಷವಾಗಿ ಮಾತನಾಡುವ ಅಭ್ಯಾಸ ನನಗಿಲ್ಲ. ದರ್ಶನ್ ಬಗ್ಗೆಯೂ ನಾನು ಈ ಹಿಂದೆ ಹಲವು ಬಾರಿ ಒಳ್ಳೆಯ ಮಾತುಗಳನ್ನೇ ಆಡಿದ್ದೇನೆ. ಮಧ್ಯದಲ್ಲಿ ಯಾರೋ ಲಿಂಕ್ ಕಲ್ಪಿಸಿ ಅಭಿಮಾನಿಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ” ಎಂದು ಹೇಳುವ ಮೂಲಕ ಸುದೀಪ್ ಶಾಂತಿ ಕಾಪಾಡುವಂತೆ ಕರೆ ನೀಡಿದ್ದಾರೆ.























