ಕಲೆ–ಸಂಸ್ಕೃತಿಯ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆಯಾಮ
ಕಾರವಾರ: ಜಿಲ್ಲೆಯ ಸಾಂಸ್ಕೃತಿಕ ಪರಂಪರೆ, ಕಲೆ ಹಾಗೂ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ ಯುವ ಪೀಳಿಗೆಗೆ ಅದನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯೊಂದಿಗೆ, ಕಳೆದ ಎಂಟು ವರ್ಷಗಳಿಂದ ಸ್ಥಗಿತಗೊಂಡಿದ್ದ ‘ಕರಾವಳಿ ಉತ್ಸವ’ಕ್ಕೆ ಸೋಮವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿರುವ ಮಯೂರವರ್ಮ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಏಳು ದಿನಗಳ ಕಾಲ ನಡೆಯಲಿರುವ ಈ ಸಪ್ತಾಹವನ್ನು ಉದ್ಘಾಟಿಸಿದರು. ಡಿಸೆಂಬರ್ 28ರ ವರೆಗೆ ಉತ್ಸವ ವೈಭವದಿಂದ ನಡೆಯಲಿದೆ.
ಇದನ್ನೂ ಓದಿ:ರೈತರು ಬೆಳೆದ ಬೆಳೆಗಳಿಂದ ಸಚಿವ ಎಂ.ಬಿ. ಪಾಟೀಲರಿಗೆ ತುಲಾಭಾರ
ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹವೇ ಉತ್ಸವದ ಉದ್ದೇಶ: ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವ ಮಂಕಾಳ ಎಸ್. ವೈದ್ಯ ಅವರು, “ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಕರಾವಳಿ ಉತ್ಸವವನ್ನು ಇದೀಗ ಪುನರಾರಂಭಿಸಲಾಗಿದೆ. ಸ್ಥಳೀಯ ಕಲಾವಿದರಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸುವುದು ಹಾಗೂ ನಮ್ಮ ಕರಾವಳಿ ಸಂಸ್ಕೃತಿಯನ್ನು ಉಳಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಕರಾವಳಿ ಭಾಗದ ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯಲು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ ಜಾರಿಗೊಳಿಸಲಾಗುವುದು. ಪ್ರಕೃತಿ ಹಾಗೂ ಮೀನುಗಾರರ ಹಿತಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು,” ಎಂದು ಹೇಳಿದರು.
ಮೂಲಸೌಕರ್ಯ, ಆಸ್ಪತ್ರೆ ಅಭಿವೃದ್ಧಿಗೆ ಭರವಸೆ: ಶಾಸಕ ಹಾಗೂ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಲಿಮಿಟೆಡ್ ಅಧ್ಯಕ್ಷ ಸತೀಶ್ ಸೈಲ್ ಮಾತನಾಡಿ, “ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವ ಪುನಾರಂಭವಾಗಿರುವುದು ಜಿಲ್ಲೆಯ ಜನತೆಗೆ ಸಂತಸದ ವಿಷಯ. ಉತ್ಸವದ ಯಾವುದಾದರೊಂದು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ. ಆ ಸಂದರ್ಭದಲ್ಲಿ ರಾಮನಗುಳಿ ಸೇತುವೆ, ಮಂಜುಗುಣಿ ಸೇತುವೆ ಹಾಗೂ 450 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗುವುದು,” ಎಂದು ತಿಳಿಸಿದರು.
ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್
ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಗುರಿಯೊಂದಿಗೆ ಟ್ರಾಮಾ ಸೆಂಟರ್ ಈಗಾಗಲೇ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ: ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಗೋವಾ ರಾಜ್ಯವನ್ನು ಅವಲಂಬಿಸುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದ ಸೈಲ್ ಅವರು, “380 ಕಿ.ಮೀ ಉದ್ದದ ಕರಾವಳಿ ತೀರ, ಶರಾವತಿ, ಗಂಗಾವಳಿ ಹಾಗೂ ಅಘನಾಶಿನಿ ನದಿಗಳ ಹಿನ್ನೀರು ಪ್ರದೇಶಗಳು ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳನ್ನು ಹೊಂದಿವೆ. ಕೈಗಾರಿಕೆ ಹಾಗೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಲಾಗುವುದು,” ಎಂದರು.
ಕ್ರೀಡೆ–ಸಂಸ್ಕೃತಿಯ ವೈಭವ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಪ್ರಾಸ್ತಾವಿಕ ಭಾಷಣದಲ್ಲಿ, “ಉತ್ಸವದ ಅಂಗವಾಗಿ ಚಿತ್ರಕಲೆ, ರಂಗೋಲಿ, ರೀಲ್ಸ್ ಮೇಕಿಂಗ್, ಗಾಳಿಪಟ ಉತ್ಸವ, ಅಡುಗೆ ಸ್ಪರ್ಧೆ, ಶ್ವಾನ ಪ್ರದರ್ಶನ, ದೋಣಿ ಸ್ಪರ್ಧೆ, ಕರಾವಳಿ ರನ್, ಮರಳು ಚಿತ್ರಕಲೆ ಸೇರಿದಂತೆ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ,” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಎಚ್ಚರ! ಒಟಿಪಿ ಕೇಳದೇ ಮೊಬೈಲ್ ಹ್ಯಾಕ್ ಮಾಡ್ತಾರೆ!
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಶಾಂತರಾಮ ಬುಡ್ನ ಸಿದ್ದಿ, ಜಿಲ್ಲಾ ಪಂಚಾಯತ್ ಸಿಇಒ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂಗಲಾ ಎಂ. ನಾಯ್ಕ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.























