ಹುಬ್ಬಳ್ಳಿ: ಭಾರತೀಯ ರೈಲ್ವೆ ಪ್ರಯಾಣ ದರಗಳಲ್ಲಿ ಬದಲಾವಣೆ ಆಗಿದ್ದು, ಪ್ರತಿ ಕಿಮೀಗೆ 1 ಪೈಸೆ ಪರಿಷ್ಕರಣೆಯಾಗಿದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ಹೊರೆ ಆಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಪರಿಷ್ಕರಣೆಯಿಂದ ಸುಮಾರು 600 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಈ ಹಣವನ್ನು ರೈಲು ನಿಲ್ದಾಣದ ಅಭಿವೃದ್ಧಿ, ಸ್ವಚ್ಛತೆಗೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿಯೇ ಬಳಸಲಾಗುವುದು ಎಂದರು.
215 ಕಿಲೋಮೀಟರ್ ವರೆಗಿನ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ಆದರೆ, 215 ಕಿ. ಮೀಗಿಂತ ಹೆಚ್ಚು ದೂರ ಪ್ರಯಾಣಿಸುವವರಿಗೆ ಸಾಮಾನ್ಯ ವರ್ಗದಲ್ಲಿ ಪ್ರತಿ ಕಿ.ಮೀಗೆ 1 ಪೈಸೆ ಮತ್ತು ಮೇಲ್/ಎಕ್ಸ್ಪ್ರೆಸ್ ಸೇವೆಗಳಲ್ಲಿ ಪ್ರತಿ ಕಿಮೀಗೆ 2 ಪೈಸೆ ದರ ಏರಿಕೆಯಾಗಲಿದೆ. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚಿಸಿರುವ 3-4 ರೂ. ಎದುರು 1-2 ಪೈಸೆ ನಗಣ್ಯ ಎಂದು ನುಡಿದರು.
ರೈಲ್ವೆ ಹಳಿಗಳ ವಿಸ್ತರಣೆ, ಆಪರೇಷನ್ ವೆಚ್ಚ ಹೆಚ್ಚಳ, ಸುರಕ್ಷತೆ, ದಕ್ಷತೆಯ ಹೆಚ್ಚಳ, ಹೊಸ ಹೊಸ ರೈಲು ಸೇವೆಗಳಿಗಾಗಿ ರೈಲ್ವೆ ಟಿಕೆಟ್ ದರವನ್ನು ಪೈಸೆಗಳ ಲೆಕ್ಕದಲ್ಲಿ ಏರಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.























