ಉಡುಪಿ ಮಲ್ಪೆ- ಕೊಚ್ಚಿನ್ ಶಿಪ್ ಯಾರ್ಡ್ ಪೊಲೀಸರಿಂದ ಮತ್ತೊಬ್ಬ ಆರೋಪಿಯ ಬಂಧನ – ಬಂಧಿತರ ಸಂಖ್ಯೆ ಮೂವರಿಗೆ ಏರಿಕೆ
ಉಡುಪಿ: ಭಾರತದ ಭದ್ರತೆಗೆ ಗಂಭೀರ ಆತಂಕ ಮೂಡಿಸುವಂತಹ ಪ್ರಕರಣವೊಂದರಲ್ಲಿ, ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ್ದ ಆರೋಪದಲ್ಲಿ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಬಂಧಿತನನ್ನು ಗುಜರಾತ್ ರಾಜ್ಯದ ಆನಂದ ತಾಲೂಕಿನ ಕೈಲಾಸ್‌ನಗರಿ ನಿವಾಸಿ ಹಿರೇಂದ್ರ (34) ಎಂದು ಗುರುತಿಸಲಾಗಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿ, ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬ ಇಬ್ಬರನ್ನು ಮಲ್ಪೆ ಪೊಲೀಸರು ಬಂಧಿಸಿದ್ದರು. ಈ ಇಬ್ಬರೂ ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್ (Cochin Shipyard) ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ‘ನರೇಗಾ’ಗೆ ಪರ್ಯಾಯ VB—G RAM G ಕಾಯ್ದೆಗೆ ರಾಷ್ಟ್ರಪತಿ ಅಂಕಿತ
ಪೊಲೀಸ್ ತನಿಖೆಯ ಪ್ರಕಾರ, ಹಿರೇಂದ್ರ ಹಣದ ಲಾಭಕ್ಕಾಗಿ ರೋಹಿತ್ ಮತ್ತು ಸಂತ್ರಿಗೆ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒದಗಿಸಿದ್ದ. ಆ ಸಿಮ್‌ಗಳ ಬಳಕೆಯಿಂದಲೇ ಅವರು ಪಾಕಿಸ್ತಾನದಲ್ಲಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ, ಭಾರತೀಯ ನೌಕಾಪಡೆಯ ಅತಿಸಂವೇದನಾಶೀಲ ಹಾಗೂ ಗೌಪ್ಯ ಮಾಹಿತಿಗಳನ್ನು ರವಾನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಶೇಷವಾಗಿ, ನೌಕಾಪಡೆಯ ಹಡಗುಗಳ ಸಂಖ್ಯೆ, ಹಡಗುಗಳ ಚಲನವಲನ, ಬಂದರು ಪ್ರದೇಶದ ಭದ್ರತಾ ವ್ಯವಸ್ಥೆ, ಇತರೆ ರಹಸ್ಯ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ಸೇರಿದಂತೆ ಆನ್‌ಲೈನ್ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.









