
ಹುಬ್ಬಳ್ಳಿ: “ನಾನು ಕಂಡ ಕನಸು ನನಸಾಗಿಸಿಕೊಳ್ಳಬೇಕು… ನಾನು ಹುಟ್ಟಿದ ಊರಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು… ದೂರದ ದೇಶಗಳು, ಮಹಾನಗರಗಳ ಆಕರ್ಷಕ ಬದುಕಿಗಿಂತ ನಮ್ಮೂರಲ್ಲೇ, ನಮ್ಮ ಸುತ್ತಮುತ್ತಲಿನ ನಗರಗಳಲ್ಲೇ ಭವಿಷ್ಯ ರೂಪಿಸಿಕೊಂಡು ತುಂಬು ಪರಿವಾರದೊಂದಿಗೆ ಬಾಳಬೇಕು…” ಇಂತಹ ಹತ್ತು ಹಲವು ಕನಸುಗಳನ್ನು ಹೊತ್ತುಕೊಂಡು, ಅವುಗಳ ಸಾಕಾರಕ್ಕೆ ದಾರಿ ಹುಡುಕುತ್ತಿದ್ದ ನೂರಾರು ಯುವಕರು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮುಂದೆ ಬನ್ನಿ ಮೀಟ್ ಅಪ್’ ಕಾರ್ಯಾಗಾರಕ್ಕೆ ಆಗಮಿಸಿದ್ದರು.
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ಸಿಟಿಐಇ (CTIE) ಹಾಗೂ ‘ಮುಂದೆ ಬನ್ನಿ’ ಸ್ಟಾರ್ಟ್‌ಅಪ್ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಲಾದ ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ, ಯುವಜನತೆಗೆ ಮಹತ್ವದ ಸಂದೇಶ ನೀಡಿದರು.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
ದೂರದ ನಗರಗಳಿಗಲ್ಲ, ನಿಮ್ಮೂರಿನ ಭವಿಷ್ಯಕ್ಕೆ ಬಂಡವಾಳ ಹಾಕಿ: ಡಾ. ಅಶೋಕ ಶೆಟ್ಟರ ಮಾತನಾಡಿ, “ಮಹಾನಗರಗಳಿಗೆ ಹೋಗಿ ಭವಿಷ್ಯ ರೂಪಿಸಿಕೊಳ್ಳುವುದು, ವಿದೇಶಗಳಲ್ಲಿ ಆಕರ್ಷಕ ವೇತನ ಪಡೆಯುವುದು ತಪ್ಪಲ್ಲ. ಆದರೆ ಕೆಲ ವರ್ಷಗಳ ಬಳಿಕ ತವರೂರು, ಪೋಷಕರು, ಬೆಳೆದ ಪರಿಸರ ಎಲ್ಲವೂ ನಮ್ಮನ್ನು ಮರಳಿ ಕರೆಯುತ್ತದೆ. ಪೋಷಕರು ಮಕ್ಕಳಿಗಾಗಿ ಹಂಬಲಿಸುತ್ತಾರೆ. ಈ ಸ್ಥಿತಿ ಬದಲಾಗಬೇಕು. ನಿಮ್ಮ ವಿಭಿನ್ನ ಆಲೋಚನೆ, ಕುಶಲತೆ ಮತ್ತು ಹೊಸತನವನ್ನು ಬಳಸಿಕೊಂಡು ನಿಮ್ಮೂರಲ್ಲೇ ಬೆಳೆಯುವ ಸಾಹಸ ಮಾಡಬೇಕು” ಎಂದು ಕರೆ ನೀಡಿದರು.
ಉತ್ತರ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿಯ ಆರಂಭ: “ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಈ ಭಾಗದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಪ್ರಥಮವಾಗಿ ಪ್ರೋತ್ಸಾಹ ನೀಡಿತು. ಇನ್‌ಕ್ಯುಬೇಶನ್ ಕೇಂದ್ರ ಆರಂಭಿಸಲಾಯಿತು. ಇಂದು ಮಹಾನಗರಗಳಲ್ಲಿ 7–8 ಇನ್‌ಕ್ಯುಬೇಶನ್ ಕೇಂದ್ರಗಳಿವೆ. 150ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಯಶಸ್ಸಿನ ದಾರಿಯಲ್ಲಿ ಸಾಗುತ್ತಿವೆ. ‘ರೈಸ್ ಇನ್ ನಾರ್ಥ್ ಕರ್ನಾಟಕ’ ಪರಿಕಲ್ಪನೆ ಸಂಪೂರ್ಣವಾಗಿ ಸಾಕಾರಗೊಳ್ಳಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ: 600 ಬಿಲಿಯನ್ ಡಾಲರ್ ಸಂಪತ್ತು: ಜಗತ್ತಿಗೆ ಶ್ರೀಮಂತ ಎಲಾನ್ ಮಸ್ಕ್
ಮಂಗಳೂರಿನಂತಹ ನಗರಗಳಲ್ಲಿ ಯಶಸ್ಸು ಕಂಡ ಅನೇಕ ಯುವಕರು, ಸ್ವಂತ ಊರಿನಲ್ಲಿ ಅವಕಾಶ ದೊರಕಿದರೆ ಶೇ.90ರಷ್ಟು ಜನ ವಾಪಸ್ ಬರಲು ಸಿದ್ಧರಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿ, ಸ್ಥಳೀಯ ಸ್ಟಾರ್ಟ್‌ಅಪ್‌ಗಳೇ ಇತರರಿಗೆ ಭರವಸೆಯ ದೀಪವಾಗುತ್ತವೆ ಎಂದು ಹೇಳಿದರು.
‘ಮುಂದೆ ಬನ್ನಿ’ ಕಾರ್ಯಾಗಾರ ಯುವಕರಿಗೆ ದಿಕ್ಕು ತೋರಿಸುತ್ತದೆ: ಕುಲಪತಿ ಡಾ. ಪ್ರಕಾಶ ತೆವರಿ ಮಾತನಾಡಿ, “ಉತ್ತರ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಆರಂಭಿಸಬೇಕು ಎನ್ನುವ ಉತ್ಸಾಹಿಗಳಿಗೆ ‘ಮುಂದೆ ಬನ್ನಿ’ ಕಾರ್ಯಾಗಾರ ಬಹಳ ಸಹಕಾರಿಯಾಗುತ್ತದೆ. ಯಶಸ್ವಿ ಸ್ಟಾರ್ಟ್‌ಅಪ್ ತಜ್ಞರು ಹಾಗೂ ಸಂಸ್ಥೆಗಳ ಮುಖ್ಯಸ್ಥರಿಂದ ಸಿಗುವ ಸಲಹೆ, ಮಾರ್ಗದರ್ಶನ ಯುವಕರಿಗೆ ಸ್ಪೂರ್ತಿಯಾಗಲಿದೆ” ಎಂದರು.
ಪಟ್ಟಣಗಳಲ್ಲೇ ಹೆಚ್ಚು ಪ್ರತಿಭೆ ಇದೆ: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, “ಬೃಹತ್ ಮಹಾನಗರಗಳಿಗಿಂತ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೇ ಹೆಚ್ಚು ಪ್ರತಿಭಾಶಾಲಿಗಳು ಇದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಯಶಸ್ಸಿನ ಶಿಖರ ತಲುಪುವುದು ಖಚಿತ. ಅಂತಹ ಪ್ರತಿಭೆಗಳಿಗೆ ‘ಮುಂದೆ ಬನ್ನಿ’ ಕಾರ್ಯಾಗಾರ ವೇದಿಕೆಯಾಗುತ್ತಿದೆ” ಎಂದು ಶ್ಲಾಘಿಸಿದರು.
ಇದನ್ನೂ ಓದಿ: ರೆಡ್ ಡೈಮಂಡ್ ಪೇರಲ: ಬಾಬಾನಗರದ ನೆಲದಲ್ಲಿ ಅರಳುತ್ತಿದೆ ಹಸಿರು ವಜ್ರ!
‘ರೈಸ್ ಇನ್ ನಾರ್ಥ್ ಕರ್ನಾಟಕ’ (RINK) ಮಾರ್ಗದರ್ಶಿ ಯೋಜನೆ ಅನಾವರಣ: ಈ ಸಂದರ್ಭದಲ್ಲಿ ‘ನಮ್ಮೂರಲ್ಲೇ ದೊಡ್ಡದನ್ನು ಸಾಧಿಸೋಣ, ಉತ್ತಮವಾಗಿ ಬಾಳೋಣ’ ಎಂಬ ಪರಿಕಲ್ಪನೆಯ ‘ರೈಸ್ ಇನ್ ನಾರ್ಥ್ ಕರ್ನಾಟಕ (RINK)’ ಮಾರ್ಗದರ್ಶಿ ಕಾರ್ಯಕ್ರಮದ ಪೋಸ್ಟರ್‌ನ್ನು ಅತಿಥಿಗಳು ಅನಾವರಣಗೊಳಿಸಿದರು.
ನಿಮ್ಮ ಕನಸಿನ ರೆಕ್ಕೆಗೆ ಬೆನ್ನೆಲುಬು ‘ಮುಂದೆ ಬನ್ನಿ’: ‘ಮುಂದೆ ಬನ್ನಿ’ ಸ್ಟಾರ್ಟ್‌ಅಪ್ ಮುಖ್ಯಸ್ಥ ವಸಂತ ಶೆಟ್ಟಿ ಮಾತನಾಡಿ, “ಪ್ರತಿಯೊಬ್ಬ ಪೋಷಕರೂ ಮಕ್ಕಳಿಗೆ ಓದು, ಒಳ್ಳೆಯ ಕೆಲಸ ಹುಡುಕು ಎಂದು ಹೇಳ್ತಾರೆ. ಆದರೆ ಬಿಸಿನೆಸ್ ಮಾಡು, ಎಷ್ಟೇ ಲಾಸ್ ಆದರೂ ಪರವಾಗಿಲ್ಲ ಎಂದು ಹೇಳುವವರು ವಿರಳ. ಈ ಧೋರಣೆಯೇ ಹಿಂಜರಿಕೆಗೆ ಕಾರಣ. ಆ ಹಿಂಜರಿಕೆಯನ್ನು ಹೋಗಲಾಡಿಸಿ, ಯುವಕರನ್ನು ಪ್ರೋತ್ಸಾಹಿಸುವುದೇ ‘ಮುಂದೆ ಬನ್ನಿ’ಯ ಮೂಲ ಆಶಯ. ಇಲ್ಲಿ ಕೇವಲ ಪ್ರೋತ್ಸಾಹವಲ್ಲ, ಯಶಸ್ವಿ ಸಾಧಕರ ಅನುಭವ, ಮಾರ್ಗದರ್ಶನ ಮತ್ತು ಅಗತ್ಯವಿರುವ ಎಲ್ಲಾ ಸಹಕಾರ ದೊರೆಯುತ್ತದೆ. ವಿಭಿನ್ನ ಚಿಂತನೆ ಮತ್ತು ಕನಸು ಇದ್ದರೆ ಸಾಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಲ್‌ಇ ತಾಂತ್ರಿಕ ವಿವಿ ಸಿಟಿಐಇ ನಿರ್ದೇಶಕ ವಿನಾಯಕ ಹೊಸಮನಿ, ಮುಂದೆ ಬನ್ನಿ ಮೀಟ್ ಅಪ್ ಸಂಯೋಜಕ ಚೇತನ್ ಶೆಟ್ಟರ, ರೇನ್ ಮ್ಯಾಟರ್ ಸ್ಟಾರ್ಟ್‌ಅಪ್‌ನ ನಿಹಾಲ್ ಶೆಟ್ಟಿ, ಜಾವಾ ಕ್ಯಾಪಿಟಲ್ ಸಹ ಸಂಸ್ಥಾಪಕ ವಿನೋದ ಶಂಕರ್ ವೇದಿಕೆಯಲ್ಲಿದ್ದರು.








