ದಾವಣಗೆರೆ: ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸುವಂತಹ ಅತಿದೊಡ್ಡ ಸೈಬರ್ ಅಪರಾಧ ಪ್ರಕರಣವೊಂದು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಕರೆಂಟ್ ಅಕೌಂಟ್ ಮಾರಾಟದ ಮೂಲಕ ನಡೆಸಲಾಗುತ್ತಿದ್ದ ಅಕ್ರಮ ಹಣಕಾಸು ವಹಿವಾಟಿನಲ್ಲಿ 1,000 ಕೋಟಿ ರೂ.ಗೂ ಅಧಿಕ ಮೊತ್ತದ ಹಣ ಹರಿದಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದಾರೆ.
ಇಬ್ಬರು ಪ್ರಮುಖ ಆರೋಪಿಗಳ ಬಂಧನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಬೇಲೂರು ಮೂಲದ ಅರ್ಫಾತ್ ಪಾಷಾ ಗುಜರಾತ್‌ನ ಅಹಮದಾಬಾದ್ ಮೂಲದ ಸಂಜಯ್ ಕುಂದ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಅರ್ಫಾತ್ ಪಾಷಾ ಖಾತೆಯಲ್ಲಿ ಇದ್ದ 18 ಕೋಟಿ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
ಪೊಲೀಸರ ತನಿಖೆಯ ಪ್ರಕಾರ, ಕಳೆದ ಎರಡು ತಿಂಗಳ ಅವಧಿಯಲ್ಲಿ ಅರ್ಫಾತ್ ಪಾಷಾ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಸುಮಾರು 132 ಕೋಟಿ ರೂ. ಹಣವನ್ನು ವಿತ್‌ಡ್ರಾ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ಅರ್ಫಾತ್ ನೀಡಿದ ಮಾಹಿತಿಯ ಆಧಾರದಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ ಸಂಜಯ್ ಕುಂದ್ ಅನ್ನು ಬಂಧಿಸಲಾಗಿದೆ.
ಸಂತ್ರಸ್ತನೇ ಆರೋಪಿ: ಪ್ರಕರಣಕ್ಕೆ ಅಚ್ಚರಿಯ ತಿರುವು: ಈ ಪ್ರಕರಣಕ್ಕೆ ಮತ್ತೊಂದು ಅಚ್ಚರಿಯ ತಿರುವು ಸಿಕ್ಕಿದ್ದು, ಸಂತ್ರಸ್ತನಾಗಿ ದೂರು ನೀಡಿದ್ದ ವ್ಯಕ್ತಿಯೇ ಪ್ರಮುಖ ಆರೋಪಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದಾವಣಗೆರೆ ಮೂಲದ ಹೆಚ್.ಹೆಚ್. ಪ್ರಮೋದ್ ಎಂಬ ವ್ಯಕ್ತಿ, ತನ್ನ ಬ್ಯಾಂಕ್ ಕರೆಂಟ್ ಖಾತೆಯಿಂದ 52 ಲಕ್ಷ ರೂ. ಕಳೆದುಕೊಂಡಿರುವುದಾಗಿ ಎರಡು ತಿಂಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದ. ಆರಂಭದಲ್ಲಿ ಸಂತ್ರಸ್ತನಂತೆ ಕಂಡ ಪ್ರಮೋದ್‌ನನ್ನು ವಿಚಾರಣೆ ನಡೆಸಿದಾಗ, ಆತನ ಖಾತೆಗೆ ಅನಾಮಧೇಯ ಖಾತೆಗಳಿಂದಲೇ 150 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಕನಿಷ್ಠ ತಾಪಮಾನದಲ್ಲಿ ಬೆಳಗಾವಿ ಮುಂಚೂಣಿ: ಉತ್ತರ ಕರ್ನಾಟಕ ಕಡುಚಳಿಯ ಹಿಡಿತದಲ್ಲಿ
ಉದ್ಯಮವೇ ಇಲ್ಲ, ಆದರೆ ಕರೆಂಟ್ ಅಕೌಂಟ್!: ಪೊಲೀಸರ ತನಿಖೆಯಲ್ಲಿ, ಯಾವುದೇ ವ್ಯಾಪಾರ ಅಥವಾ ಉದ್ಯಮವಿಲ್ಲದಿದ್ದರೂ ಕರೆಂಟ್ ಅಕೌಂಟ್ ತೆರದು, ಅದನ್ನು ಬೇರೆವರಿಗೆ ಮಾರಾಟ ಮಾಡುವ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿರುವುದು ಬಹಿರಂಗವಾಗಿದೆ. ಈ ಖಾತೆಗಳಿಗೆ ದುಬೈ ಸೇರಿದಂತೆ ವಿದೇಶಗಳಿಂದ ಆನ್‌ಲೈನ್ ಗೇಮಿಂಗ್, ಗ್ಯಾಂಬ್ಲಿಂಗ್, ಫೇಕ್ ಟ್ರೇಡಿಂಗ್, ಇತರ ಅಕ್ರಮ ಡಿಜಿಟಲ್ ಚಟುವಟಿಕೆಗಳಿಂದ
ಕೋಟ್ಯಾಂತರ ರೂ. ಹಣ ಹರಿದುಬರುತ್ತಿದ್ದ ಮಾಹಿತಿ ಲಭ್ಯ: ಪ್ರಮೋದ್ ತನ್ನ ಕರೆಂಟ್ ಅಕೌಂಟ್ ಅನ್ನು ಇತರರಿಗೆ ಬಳಕೆಗೆ ನೀಡಿ ಕಮಿಷನ್ ಪಡೆಯುತ್ತಿದ್ದ ಎನ್ನಲಾಗಿದೆ. ಆದರೆ, ಜಮೆಯಾಗಿದ್ದ ಹಣಕ್ಕೆ ಕಮಿಷನ್ ನೀಡದ ಕಾರಣಕ್ಕೆ ವಂಚಕರು ಹಣ ಎಗರಿಸಿದ್ದಾರೆ ಎಂದು ಹೇಳಿ, ಆತ ಪೊಲೀಸರಿಗೆ ದೂರು ನೀಡಿದ್ದಾನೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ
ರಾಜ್ಯಾದ್ಯಂತ ವಿಸ್ತರಿಸಿರುವ ವಂಚನೆ ಜಾಲ: ತನಿಖೆ ಮುಂದುವರಿದಂತೆ, ಈ ಸೈಬರ್ ವಂಚನೆ ಜಾಲ ರಾಜ್ಯಾದ್ಯಂತ ವಿಸ್ತರಿಸಿರುವುದು ಕಂಡುಬಂದಿದೆ. ಹಲವು ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ನಡೆಸಲಾಗಿದ್ದು, ಒಟ್ಟು ವಹಿವಾಟಿನ ಮೊತ್ತ 1,000 ಕೋಟಿ ರೂ.ಗೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಕರಣದ ವ್ಯಾಪ್ತಿ ಹಲವು ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ತನಿಖೆಗಾಗಿ ಈ ಕೇಸ್ ಅನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.























