ಬೆಳಗಾವಿ: ರಾಜ್ಯಾದ್ಯಂತ ಚಳಿಗಾಲ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿರುವ ನಡುವೆ, ಬೆಳಗಾವಿಯಲ್ಲಿ ಕನಿಷ್ಠ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಉತ್ತರ ಕರ್ನಾಟಕದ ಚಳಿಯ ಕೇಂದ್ರಗಳ ಪೈಕಿ ಮತ್ತೊಮ್ಮೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಅತ್ಯಂತ ಚಳಿಯಾದ ಜಿಲ್ಲೆಗಳ ಪಟ್ಟಿಯಲ್ಲಿ ಬೆಳಗಾವಿ ಮೂರನೇ ಸ್ಥಾನಕ್ಕೆ ಏರಿದೆ.
ಹವಾಮಾನ ಇಲಾಖೆ ಮಾಹಿತಿಯಂತೆ, ಬೀದರ್ (5.5°C) ಅತ್ಯಂತ ಚಳಿಯಾದ ಜಿಲ್ಲೆಯಾಗಿದ್ದು, ಧಾರವಾಡ (6.4°C) ಎರಡನೇ ಸ್ಥಾನದಲ್ಲಿದೆ. ಈ ಎರಡರ ನಂತರ ಬೆಳಗಾವಿ (7°C) ಚಳಿಯ ತೀವ್ರತೆಯಿಂದ ಜನರನ್ನು ತತ್ತರಿಸುವಂತೆ ಮಾಡುತ್ತಿದೆ.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
ಉತ್ತರ ಕರ್ನಾಟಕದಲ್ಲಿ ಏಕಾಏಕಿ ತಾಪಮಾನ ಇಳಿಕೆ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಏಕಾಏಕಿ ಕುಸಿತ ಕಂಡಿದ್ದು, ಬಾಗಲಕೋಟೆ – 7.8°C ಕಲಬುರಗಿ – 8.1°C ಗದಗ–ಹಾವೇರಿ – 8.2°C ಇವುಗಳಲ್ಲೂ ಕಡುಚಳಿ ವ್ಯಾಪಕವಾಗಿದೆ. ಈ ಹಿನ್ನಲೆಯಲ್ಲಿ, ಬೆಳಗಾವಿ ಪ್ರದೇಶವು ಮತ್ತೆ ತನ್ನ ‘ಚಳಿಯ ಕೇಂದ್ರ’ ಎಂಬ ಹೆಗ್ಗಳಿಕೆಯನ್ನು ದೃಢಪಡಿಸುತ್ತಿದೆ.
ಬೆಳಿಗ್ಗೆ–ರಾತ್ರಿ ತೀವ್ರ ಚಳಿ: ಬೆಳಗಾವಿಯಲ್ಲಿ ವಿಶೇಷವಾಗಿ ಬೆಳಗಿನ ಹೊತ್ತು ಮತ್ತು ರಾತ್ರಿ ವೇಳೆಯಲ್ಲಿ ತಣ್ಣನೆಯ ಗಾಳಿ ಬೀಸುತ್ತಿರುವುದರಿಂದ, ಜನಸಾಮಾನ್ಯರ ದಿನಚರಿಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಶಾಲಾ ಮಕ್ಕಳು, ವೃದ್ಧರು ಹಾಗೂ ಕಾರ್ಮಿಕರು ಚಳಿಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೆಚ್ಚಗಿನ ಉಡುಪು. ಹೀಟರ್‌ಗಳು. ಕಾಫಿ, ಟೀ ಸೇರಿದಂತೆ ಬಿಸಿ ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ: ಕಬ್ಬು ಬೆಳೆ ಪ್ರದೇಶಗಳಲ್ಲಿ ಮಣ್ಣಿನ ಆರೋಗ್ಯ–ನೀರಿನ ಸಮಗ್ರ ನಿರ್ವಹಣೆಗೆ ಒತ್ತು: ಸಿಎಂ ಸಿದ್ದರಾಮಯ್ಯ
ಕರಾವಳಿ–ಉತ್ತರ ಕರ್ನಾಟಕದಲ್ಲಿ ಸ್ಪಷ್ಟ ವ್ಯತ್ಯಾಸ: ಇನ್ನೊಂದೆಡೆ, ಕರಾವಳಿ ಜಿಲ್ಲೆಗಳಾದ ಉಡುಪಿ (15.7°C) ಮತ್ತು ದಕ್ಷಿಣ ಕನ್ನಡ (16.6°C) ಜಿಲ್ಲೆಗಳಲ್ಲಿ ತಾಪಮಾನ ತುಸು ಹೆಚ್ಚಿರುವುದು ಉತ್ತರ ಕರ್ನಾಟಕದೊಂದಿಗೆ ಸ್ಪಷ್ಟ ವ್ಯತ್ಯಾಸವನ್ನು ತೋರಿಸುತ್ತದೆ.
ಮುಂದುವರಿಯಲಿದೆ ಚಳಿಯ ಪ್ರಭಾವ: ಹವಾಮಾನ ತಜ್ಞರ ಪ್ರಕಾರ, ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ ಕೆಲವು ದಿನಗಳವರೆಗೆ ಚಳಿಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇದೆ. ವಿಶೇಷವಾಗಿ ಬೆಳಗಾವಿ ಸೇರಿದಂತೆ ಎತ್ತರದ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಇನ್ನಷ್ಟು ಇಳಿಯುವ ಸೂಚನೆಗಳು ಲಭ್ಯವಾಗಿವೆ.
ಒಟ್ಟಾರೆ, ರಾಜ್ಯದ ಚಳಿಗಾಲದ ಹವಾಮಾನ ನಕ್ಷೆಯಲ್ಲಿ ಬೆಳಗಾವಿ ಮತ್ತೊಮ್ಮೆ ಪ್ರಮುಖವಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಜನರು ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.






















