Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕೋಳಿ ಅಂಕಕ್ಕೆ ದಾಳಿ: ಪೊಲೀಸರ ಕ್ರಮಕ್ಕೆ ಶಾಸಕ ಅಶೋಕ್ ರೈ ಗರಂ

ಕೋಳಿ ಅಂಕಕ್ಕೆ ದಾಳಿ: ಪೊಲೀಸರ ಕ್ರಮಕ್ಕೆ ಶಾಸಕ ಅಶೋಕ್ ರೈ ಗರಂ

0
21

ಸಂ.ಕ.ಸಮಾಚಾರ, ವಿಟ್ಲ: ಸಾಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆಗೆ ಪುತ್ತೂರು ಶಾಸಕ ಅಶೋಕ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಟ್ಲ ಸಮೀಪದ ಕೇಪು ಉಳ್ಳಾಲ್ತಿ ಕ್ಷೇತ್ರದಲ್ಲಿ ನಡೆದಿದೆ.

ಕೇಪು ಉಳ್ಳಾಲ್ತಿ ಗ್ರಾಮದ ಪಕ್ಕದ ಪ್ರದೇಶದಲ್ಲಿ ಸಂಪ್ರದಾಯದಂತೆ ಕೋಳಿ ಅಂಕ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಕೋಳಿ ಅಂಕವನ್ನು ತಡೆದು, ಕಾರ್ಯಕ್ರಮವನ್ನು ನಿಲ್ಲಿಸಲು ಮುಂದಾದರು. ವಿಷಯ ತಿಳಿಯುತ್ತಿದ್ದಂತೆ ಶಾಸಕ ಅಶೋಕ್ ರೈ ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಪೊಲೀಸರ ಕ್ರಮದ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಗಂಡು ಮೆಟ್ಟಿದ ನಾಡಿನಲ್ಲಿ ‘ಮಾರ್ಕಂಡೇಯ’ ಅಬ್ಬರಕ್ಕೆ ಕ್ಷಣಗಣನೆ

“ಇದು ಜೂಜು ಅಲ್ಲ, ಸಂಪ್ರದಾಯ”: ಘಟನಾ ಸ್ಥಳದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ, “ಈ ಕ್ಷೇತ್ರದಲ್ಲಿ ಕೋಳಿ ಅಂಕವು ಸಾಂಪ್ರದಾಯಿಕವಾಗಿ ನಡೆದುಬರುವ ಆಚರಣೆ. ಇಲ್ಲಿ ಯಾವುದೇ ಜೂಜು ನಡೆಯುತ್ತಿಲ್ಲ. ನಂಬಿಕೆಯ ಆಧಾರದ ಮೇಲೆ ಜನರು ಕೋಳಿ ತಂದು ಕೋಳಿ ಅಂಕ ಮಾಡುತ್ತಾರೆ. ಇದನ್ನು ಜೂಜು ಎಂದು ಪರಿಗಣಿಸುವುದು ಸರಿಯಲ್ಲ” ಎಂದು ಹೇಳಿದರು.

ಪ್ರತಿವರ್ಷ ಇಲ್ಲಿ ಮೂರು ದಿನಗಳ ಕಾಲ ಕೋಳಿ ಅಂಕ ನಡೆಯುತ್ತಿತ್ತು, ಆದರೆ ಈ ಬಾರಿ ಕೇವಲ ಒಂದು ದಿನ ಮಾತ್ರ ನಡೆಸಲಾಗುತ್ತಿದೆ. ಅಂತಹ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಭಾನುವಾರ ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

“ಕೋಳಿ ಅಂಕ ನಡೆದೇ ನಡೆಯುತ್ತದೆ”: ಪೊಲೀಸರ ವಿರುದ್ಧ ಗರಂ ಆದ ಶಾಸಕ, “ಇಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಥವಾ ಕುದುರೆ ರೇಸ್‌ನಂತೆ ಜೂಜು ಕಟ್ಟುವುದಿಲ್ಲ. ಎಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿಯೇ ಕೋಳಿ ಅಂಕಕ್ಕೆ ಅವಕಾಶ ನೀಡಿದ್ದೇನೆ. ಪ್ರಕರಣ ದಾಖಲಿಸುವುದಾದರೆ ಮೊದಲು ನನ್ನ ಮೇಲೆಯೇ ದಾಖಲಿಸಿ. ಆದರೆ ಯಾವುದೇ ಕಾರಣಕ್ಕೂ ಕೋಳಿ ಅಂಕ ನಿಲ್ಲಿಸಬಾರದು” ಎಂದು ಸ್ಪಷ್ಟವಾಗಿ ಹೇಳಿದರು.

ಇಂದು ಸಂಜೆ 6 ಗಂಟೆವರೆಗೆ ಅವಕಾಶ ನೀಡಿ ಎಂದು ಪೊಲೀಸರಿಗೆ ಸೂಚಿಸಿದ ಅವರು, “ನಾನೇ ಸ್ವತಃ ಇಲ್ಲಿ ಇದ್ದು ಕೋಳಿ ಅಂಕ ನಡೆಸುತ್ತೇನೆ” ಎಂದು ಘೋಷಿಸಿದರು.

ವಿಟ್ಲ ಎಸ್‌.ಐ.ಗೆ ಶಾಸಕರಿಂದ ತರಾಟೆ: ಕೋಳಿ ಅಂಕಕ್ಕೆ ದಾಳಿ ನಡೆಸಲು ಬಂದ ವಿಟ್ಲ ಪೊಲೀಸ್ ಠಾಣೆಯ ಎಸ್‌.ಐ. ಅವರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡ ಘಟನೆ ಕೂಡ ಸ್ಥಳದಲ್ಲಿ ನಡೆಯಿತು. “ಕೋಳಿ ಅಂಕಕ್ಕೆ ಬಂದವರ ಮೇಲೆ ಹಲ್ಲೆ ಮಾಡಬೇಡಿ. ಹಲ್ಲೆ ಮಾಡಿದರೆ ಅವರ ಬಳಿ ಇರುವ ವಸ್ತುಗಳಿಂದ ಮತ್ತೆ ಗಲಾಟೆ ಉಂಟಾಗುತ್ತದೆ. ಇದರಿಂದ ಶಾಂತಿ ಕದಡುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದರು.

ಈ ಘಟನೆ ಬಳಿಕ ಪೊಲೀಸರು ಯಾವುದೇ ಗಲಾಟೆಗೆ ಅವಕಾಶ ನೀಡದೇ, ಪರಿಸ್ಥಿತಿಯನ್ನು ನಿಯಂತ್ರಿಸುವತ್ತ ಗಮನ ಹರಿಸಿದರು. ಶಾಸಕರ ಹಸ್ತಕ್ಷೇಪದಿಂದ ಕೋಳಿ ಅಂಕ ಮುಂದುವರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.