ಬೆಳಗಾವಿ: ರಾಜ್ಯ ಸರ್ಕಾರವು ರೈತಪರ ಸರ್ಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಮಣ್ಣಿನ ಆರೋಗ್ಯ ಕಾಪಾಡುವಿಕೆ ಮತ್ತು ನೀರಿನ ಸಮಗ್ರ ನಿರ್ವಹಣೆಗೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
“ಭೂಮಿ ಜೀವದ ತೊಟ್ಟಿಲು. ಇಂತಹ ಜೀವದ ತೊಟ್ಟಿಲನ್ನು ನಾವು ಬಂಜೆ ಮಾಡಬಾರದು” ಎಂದು ಅವರು ರೈತರಿಗೆ ಕಿವಿಮಾತು ಹೇಳಿದರು.
ತಾಲೂಕಿನ ಹುದಲಿ ಗ್ರಾಮದಲ್ಲಿ ಆಯೋಜಿಸಿದ್ದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಹಾಗೂ ಮಂಡ್ಯ ಜಿಲ್ಲೆಗಳ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ರಸಗೊಬ್ಬರ ಬಳಕೆಯನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ: ಗಂಡು ಮೆಟ್ಟಿದ ನಾಡಿನಲ್ಲಿ ‘ಮಾರ್ಕಂಡೇಯ’ ಅಬ್ಬರಕ್ಕೆ ಕ್ಷಣಗಣನೆ
ರಸಗೊಬ್ಬರ ಬಳಕೆಯ ತಪ್ಪು ಕಲ್ಪನೆ ಬಿಡಬೇಕು: ರಸಗೊಬ್ಬರ ಹೆಚ್ಚಾಗಿ ಬಳಕೆ ಮಾಡಿದರೆ ಹೆಚ್ಚಿನ ಇಳುವರಿ ಬರುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ಸಿಎಂ ಸ್ಪಷ್ಟಪಡಿಸಿದರು. “ಭಾರತ ಕೃಷಿ ಪ್ರಧಾನ ರಾಷ್ಟ್ರ. ದೇಶದ ಜನಸಂಖ್ಯೆಯ ಬಹುಪಾಲು ಕೃಷಿಯ ಮೇಲೆಯೇ ಅವಲಂಬಿತವಾಗಿದೆ. ರೈತರಿಗೆ ಅಗತ್ಯವಾದ ನೆರವು ನೀಡುವುದು ಸರ್ಕಾರಗಳ ಪ್ರಮುಖ ಜವಾಬ್ದಾರಿ” ಎಂದು ಅವರು ಹೇಳಿದರು.
ನೀರಿನ ಮಿತ ಬಳಕೆಗೆ ಜಾಗೃತಿ: ನೀರಿನ ಸಮರ್ಪಕ ನಿರ್ವಹಣೆ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬ ರೈತರೂ ನೀರನ್ನು ಮಿತವಾಗಿ ಹಾಗೂ ಜಾಣ್ಮೆಯಿಂದ ಬಳಸಬೇಕು ಎಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಪ್ರತಿ ರೈತರ ಹತ್ತಿರ ಹೋಗಿ, ಇಲಾಖೆಯಿಂದ ಪರಿಚಯಿಸಲಾಗುವ ಹೊಸ ಬೆಳೆ ತಳಿಗಳು ಹಾಗೂ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕಳೆದ ಆಯವ್ಯಯದಲ್ಲಿ ಘೋಷಿಸಿದ ಯೋಜನೆಗಳನ್ನು ಈಗ ಜಾರಿಗೊಳಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಇದನ್ನೂ ಓದಿ: ಭಾನುವಾರ ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
ತಂತ್ರಜ್ಞಾನ ಅಳವಡಿಕೆಗೆ ಸರ್ಕಾರದ ಬೆಂಬಲ: ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಇಳುವರಿ ಮತ್ತು ಹೆಚ್ಚಿನ ಆದಾಯ ಗಳಿಸಬೇಕು ಎಂದು ಸಿಎಂ ಸಲಹೆ ನೀಡಿದರು. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಸಬ್ಸಿಡಿ ಮೂಲಕ ಹೊಸ ಕೃಷಿ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಮಾದರಿ ಕೃಷಿ: ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ವ್ಯವಸಾಯ ನಡೆಯುತ್ತಿದೆ ಎಂದು ಉಲ್ಲೇಖಿಸಿದ ಸಿದ್ದರಾಮಯ್ಯ, ಅಲ್ಲಿನ ರೈತರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡೆದು ಅಭಿವೃದ್ಧಿಪರ ಕೃಷಿ ಮಾಡುತ್ತಿದ್ದಾರೆ ಎಂದರು.
ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವಿಕೆ, ಹೊಸ ತಂತ್ರಜ್ಞಾನ ಬಳಕೆ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
“ಕೃಷಿಯನ್ನು ಲಾಭದಾಯಕವಾಗಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.























