Home ನಮ್ಮ ಜಿಲ್ಲೆ ಬಾಗಲಕೋಟೆ ಬುದ್ಧಿಮಾಂದ್ಯ ಮಕ್ಕಳ ಮೇಲೆ ಅಮಾನವೀಯ ಹಲ್ಲೆ

ಬುದ್ಧಿಮಾಂದ್ಯ ಮಕ್ಕಳ ಮೇಲೆ ಅಮಾನವೀಯ ಹಲ್ಲೆ

0
14

ಬಾಗಲಕೋಟೆ: ಬುದ್ಧಿಮಾಂದ್ಯ ಹಾಗೂ ಅಂಧ ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ನಗರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನವನಗರದ ಅಂಧ ಮಕ್ಕಳ ಶಾಲೆಯ ಮುಖ್ಯಸ್ಥನೊಬ್ಬ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿರುವ ಹೃದಯವಿದ್ರಾವಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನವನಗರದ 54ನೇ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಯೊಂದರಲ್ಲಿ ಮುಖ್ಯಸ್ಥರೊಬ್ಬರು ಪ್ಲಾಸ್ಟಿಕ್ ಪೈಪ್ ಹಾಗೂ ಬೆಲ್ಟ್ ಬಳಸಿ ಬುದ್ಧಿಮಾಂದ್ಯ ಮತ್ತು ದೃಷ್ಟಿಹೀನ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ವಿಡಿಯೋದಲ್ಲಿ ಮಕ್ಕಳು ಭಯಭೀತರಾಗಿ ಅಳುತ್ತಿರುವುದು ಕಂಡು ಬಂದಿದೆ, ಕೆಲ ಮಕ್ಕಳನ್ನು ನೆಲಕ್ಕೆ ಬೀಳಿಸಿ ಹೊಡೆಯುತ್ತಿರುವುದು ಕಂಡುಬಂದಿದ್ದು, ಈ ದೃಶ್ಯಗಳು ಸಾರ್ವಜನಿಕರ ಮನಸ್ಸನ್ನು ತೀವ್ರವಾಗಿ ಕಲಕಿವೆ.

ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

ಇನ್ನೂ ಆತ ಹಲ್ಲೆ ನಡೆಸುವ ವೇಳೆ ಶಾಲೆಯ ಇತರೆ ಸಿಬ್ಬಂದಿ ನಗುತ್ತಿರುವಂತೆ ಕಾಣಿಸಿಕೊಂಡಿರುವುದು ಮತ್ತಷ್ಟು ಆಘಾತವನ್ನುಂಟುಮಾಡಿದೆ. ಮಕ್ಕಳ ರಕ್ಷಣೆಗೆ ನೇಮಕಗೊಂಡಿರುವ ಸಂಸ್ಥೆಯಲ್ಲಿಯೇ ಈ ರೀತಿ ಅಮಾನವೀಯ ವರ್ತನೆ ನಡೆದಿರುವುದು ನಾಗರಿಕ ಸಮಾಜದ ಮೌಲ್ಯಗಳ ಮೇಲೆಯೇ ಪ್ರಶ್ನೆ ಎಬ್ಬಿಸಿದೆ.

ಪಾಲಕರ ಆಕ್ರೋಶ, ಶಾಲೆ ಮುಂದೆ ಪ್ರತಿಭಟನೆ: ಘಟನೆಯ ವಿಷಯ ಬೆಳಕಿಗೆ ಬರುತ್ತಿದ್ದಂತೆ, ಮಕ್ಕಳ ಪಾಲಕರು ಶಾಲೆ ಮುಂದೆ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಶಾಲೆಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶಾಲಾ ಮುಖ್ಯಸ್ಥ ಅಕ್ಷಯನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ದೃಶ್ಯಗಳು, ಮಕ್ಕಳ ಹೇಳಿಕೆಗಳು ಹಾಗೂ ಸಿಬ್ಬಂದಿಯ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ನಿಧನ

ಕಠಿಣ ಕ್ರಮಕ್ಕೆ ಆಗ್ರಹ: ಬುದ್ಧಿಮಾಂದ್ಯ ಹಾಗೂ ವಿಶೇಷ ಚೇತನ ಮಕ್ಕಳ ಮೇಲೆ ನಡೆದಿರುವ ಈ ಕೃತ್ಯವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಗಳು ಖಂಡಿಸಿವೆ. ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು, ಇಂತಹ ಶಾಲೆಗಳ ಮೇಲೆ ಕಠಿಣ ಮೇಲ್ವಿಚಾರಣೆ ಅಗತ್ಯ ಎಂದು ಆಗ್ರಹ ವ್ಯಕ್ತವಾಗಿದೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ತನಿಖೆಯ ಆಧಾರದಲ್ಲಿ ಮತ್ತಷ್ಟು ಬಂಧನಗಳು ಅಥವಾ ಆಡಳಿತಾತ್ಮಕ ಕ್ರಮಗಳು ನಡೆಯುವ ಸಾಧ್ಯತೆ ಇದೆ.