ಹುಬ್ಬಳ್ಳಿ: ಸವದತ್ತಿ ಬಳಿ ಗುರುವಾರ ಕಾರು ಮತ್ತು ದ್ವಿಚಕ್ರವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರನ್ನು ನಗರದ ಶಿವಕೃಪಾ ಆಸ್ಪತ್ರೆಗೆ ದಾಖಲಿಸಿದ್ದು, ಶುಕ್ರವಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೇವಿ ಸನ್ನಿಧಿಯಲ್ಲಿ ಹೈಕಮಾಂಡ್ ಒಪ್ಪಂದದ ಗುಟ್ಟು ಬಿಚ್ಚಿಟ್ಟ ಡಿಸಿಎಂ
ಸವದತ್ತಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ಹುಬ್ಬಳ್ಳಿ ನಗರದ ಶಿವಕೃಪಾ ಆಸ್ಪತ್ರೆಗೆ ತಡರಾತ್ರಿ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದ ಪ್ರಸಾದ್ ಅವರನ್ನು ರಾತ್ರಿ 12 ಗಂಟೆ ಹೊತ್ತಿಗೆ ನಗರದ ಹಳೇ ಕೋರ್ಟ್ ವೃತ್ತದ ಬಳಿ ಇರುವ ಎನ್ಎಂಆರ್ ಸ್ಕ್ಯಾನ್ ಸೆಂಟರ್‌ಗೆ ಅಂಬ್ಯುಲೆನ್ಸ್‌ನಲ್ಲಿ ಕರೆತಂದು ಸ್ಕ್ಯಾನ್ ಮಾಡಿಸಲಾಗಿತ್ತು.
ನರರೋಗ ತಜ್ಞರಾದ ಡಾ. ಸುರೇಶ ದುಗ್ಗಾಣಿ ಗಾಯಾಳುವಿಗೆ ಚಿಕಿತ್ಸೆ ನೀಡುತ್ತಿದ್ದು, ಸದ್ಯ ರಾಜೇಂದ್ರ ಪ್ರಸಾದ ಸುಧಾರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಡಿಸಿಎಂ ಡಿ.ಕೆ. ಶಿವಕುಮಾರ, ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಹಲವಾರು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಶುಕ್ರವಾರ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಭೇಟಿ ನೀಡಿದ್ದರು.























