ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಆತ್ಮಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿದರು.
ಮಂದಿರದ ಅರ್ಚಕ ವೇ. ಅಮೃತೇಶ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಅನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ವೇ. ರಾಜಗೋಪಾಲ ಅಡಿಗುರೂಜಿ, ವೇ. ಶ್ರೀಪಾದ ಅಡಿ, ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ವೇ. ಸುಬ್ರಹ್ಮಣ್ಯ ಅಡಿ ಹಾಗೂ ಅರ್ಚಕರು ಸಹಕರಿಸಿದರು.
ಮುಖ್ಯಮಂತ್ರಿಯಾಗಿ ಬರಬೇಕು: ಮಹಾಗಣಪತಿ ದೇವಾಲಯದಲ್ಲಿ ಅರ್ಚಕ ವೇ. ವಿಷ್ಣು ಶಂಕರಲಿಂಗ ಅವರು ಮುಂದಿನ ಬಾರಿ ಇಲ್ಲಿಗೆ ಬರುವಾಗ ಮುಖ್ಯಮಂತ್ರಿಯಾಗಿ ಬರಬೇಕು ಎಂದು ಪ್ರಾರ್ಥಿಸಿ ಆಶೀರ್ವದಿಸಿದರು. ಮಹಾಬಲೇಶ್ವರ ಮಂದಿರದಲ್ಲಿ ಆರತಿ ಮಾಡಿ ಪ್ರಸಾದ ಸ್ವೀಕರಿಸುವ ವೇಳೆ ವೇ. ರಾಜಾರಾಮ ಹಿರೇಗಂಗೆಯವರು ಮುಖ್ಯಮಂತ್ರಿ ಪದವಿ ದೊರೆತು ನಾಡಿನ ಜನತೆಯ ಸೇವೆ ಮಾಡುವ ಅವಕಾಶ ದೊರೆಯಲಿ ಎಂದು ಪ್ರಾರ್ಥಿಸಿ ಎಲ್ಲರ ಗಮನ ಸೆಳೆದರು.
ಇದನ್ನೂ ಓದಿ: ದೇವಿ ಸನ್ನಿಧಿಯಲ್ಲಿ ಹೈಕಮಾಂಡ್ ಒಪ್ಪಂದದ ಗುಟ್ಟು ಬಿಚ್ಚಿಟ್ಟ ಡಿಸಿಎಂ
ಇದರಂತೆ ಮಹಾಬಲೇಶ್ವರ ಮಂದಿರದಲ್ಲಿ ಅರ್ಚಕರು ಸಹ ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿ ಆಶೀರ್ವದಿಸಿದರು. ತಾಮ್ರಗೌರಿ ಮಂದಿರದ ವತಿಯಿಂದ ರಾಮಚಂದ್ರ ನಿರ್ವಾಣೇಶ್ವರ ಆತ್ಮೀಯವಾಗಿ ಸ್ವಾಗತಿಸಿ ಪೂಜೆ ಬಳಿಕ ಗೌರವಿಸಿ ಮುಖ್ಯಮಂತ್ರಿ ಪಟ್ಟ ದೊರೆಯಲಿ ಎಂದು ಆಶಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹೇಶ ಹಿರೇಗಂಗೆ, ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ತಾಲೂಕು ಅಧ್ಯಕ್ಷ ಭುವನ ಭಾಗ್ವತ, ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇವೆರಡು ದೇವಾಲಯದ ಭೇಟಿ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ಪೂಜೆ ನೆರವೇರಿಸಿದರು.
ಇದನ್ನೂ ಓದಿ: ಆರೋಗ್ಯ ಸೇತು – ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ
ಅಭಿಮಾನಿಗಳ ದಂಡು: ದೇವಾಲಯಕ್ಕೆ ಪ್ರವೇಶಿಸುತ್ತಿರುವಂತೆ ದೇವರ ದರ್ಶನಕ್ಕೆ ಬಂದ ಭಕ್ತರು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಾ ಡಿಕೆಶಿಯತ್ತ ಬಂದು ಪೋಟೋ ತೆಗೆದುಕೊಳ್ಳಲು ಮುಗಿಬಿದ್ದರು.






















