ದಾವಣಗೆರೆ: ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ದಾಖಲಾಗಿದ್ದ 173 ಕಳುವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು 20.38 ಕೋಟಿ ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದು ಶುಕ್ರವಾರ ವಾರಸುದಾರರಿಗೆ ಒಪ್ಪಿಸಿದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನವೆಂಬರ್ 30ರವರೆಗೆ ದಾಖಲಾಗಿದ್ದ ಸ್ವತ್ತು ಕಳವು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ, ಆರೋಪಿತರುಗಳನ್ನು ಪತ್ತೆ ಹಚ್ಚಿ, ಆರೋಪಿತರುಗಳು ಕಳ್ಳತನ ಮಾಡಿದ್ದ ಸ್ವತ್ತನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯದ ಅನುಮತಿ ಮೇರೆಗೆ ಸ್ವತ್ತನ್ನು ಸಂಬಂಧಿಸಿದ ವಾರಸುದಾರರಿಗೆ ಹಿಂದಿರುಗಿಸಿದರು.
ಇದನ್ನೂ ಓದಿ: ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ಹ್ಯೂಗ್ಲಿನ್ ಸೀಗಲ್ ಹಕ್ಕಿ ಸಾವು
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಾಪರ್ಟಿ ರಿಟರ್ನ್ ಪೆರೇಡ್‌ನಲ್ಲಿ ಪೂರ್ವವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ನೇತೃತ್ವದಲ್ಲಿ ಮತ್ತು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 173 ಪ್ರಕರಣಗಳಲ್ಲಿ ಅಂದಾಜು 19,64,52,459 ರೂ. ಮೌಲ್ಯದ ಸುಮಾರು 24 ಕೆಜಿ 726 ಗ್ರಾಂ ತೂಕದ ಬಂಗಾರ ಆಭರಣ ಮತ್ತು 24,35,362/- ರೂ. ಮೌಲ್ಯದ 26 ಕೆಜಿ 672 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, 85,68,938 ನಗದು, 46,28,517 ರೂ. ಮೌಲ್ಯದ 90 ವಿವಿಧ ಮಾದರಿ ವಾಹನಗಳು, 73,80,000 ರೂ. ಮೌಲ್ಯದ 492 ವಿವಿಧ ಮಾದರಿಯ ಮೊಬೈಲ್ ಹಾಗೂ 16,81,000 ರೂ. ಮೌಲ್ಯದ ಕೃಷಿ ಉಪಕರಣಗಳು ಮತ್ತು ಇತರೆ ವಸ್ತುಗಳು ಒಟ್ಟು 20,38,32,459 ರೂ. ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.






















