ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ಹ್ಯೂಗ್ಲಿನ್ ಸೀಗಲ್ ಹಕ್ಕಿ ಸಾವು

0
5

ದಾಂಡೇಲಿ: ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರಕ್ಕೆ ವಲಸೆ ಬಂದಿದ್ದ ಹ್ಯೂಗ್ಲಿನ್ ಸೀಗಲ್ ಪಕ್ಷಿಗೆ ಗಂಭೀರ ಗಾಯವಾಗಿದ್ದ ಕಾರಣ ಅದು ಗುರುವಾರ ರಾತ್ರಿ ಮೃತಪಟ್ಟಿದೆ. ದಾಂಡೇಲಿ ವನ್ಯಜೀವಿ ಪುರ್ನವಸತಿ ಕೇಂದ್ರದಲ್ಲಿ ಅದಕ್ಕೆ ಚಿಕಿತ್ಸೆ ಕೊಡಲಾಯಿತಾದರೂ, ಪಕ್ಷಿ ಚೇತರಿಸಿಕೊಳ್ಳಲಿಲ್ಲ. ಅದಕ್ಕೆ ಆದ ಗಾಯದ ಪರಿಣಾಮ ಅದಕ್ಕೆ ಆಹಾರ ಸೇವಿಸಲು ಸಹ ಆಗುತ್ತಿರಲಿಲ್ಲ ಎಂದು ಪಕ್ಷಿ ನೋಡಿಕೊಳ್ಳುತ್ತಿದ್ದ ವೈದ್ಯರು ತಿಳಿಸಿದ್ದಾರೆ‌. ಗಾಯ ಹಾಗೂ ಆಹಾರ ಸೇವನೆ ಬಿಟ್ಟ ಕಾರಣ ಹಕ್ಕಿ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಮಂಜು ಹೆಪುಗಟ್ಟಿದ ಪ್ರದೇಶದಿಂದ ಚಳಿಗಾಲದಲ್ಲಿ ಉಷ್ಣವಲಯದ ಶ್ರೀಲಂಕಾಗೆ, ಭಾರತಕ್ಕೆ ಹ್ಯೂಗ್ಲಿನ್ ಸೀಗಲ್ ವಲಸೆ ಬರುತ್ತವೆ. ಹೀಗೆ ಬಂದ ಪಕ್ಷಿಯನ್ನು ಸಂಸ್ಥೆಯೊಂದು ಸಂಶೋಧನೆಗೆ ಬಳಸಲು ಸೆರೆಹಿಡಿದು, ಕಳೆದ ಮಾರ್ಚ್‌ನಲ್ಲಿ ಉಪಗ್ರಹ ಟ್ಯಾಗಿಂಗ್ ಪರಿಕರ ಅಳವಡಿಸಿತ್ತು. ಆ ನಂತರ ಸೈಬಿರಿಯಾದತ್ತ ಪ್ರಯಾಣಿಸಿದ್ದ ಹಕ್ಕ ಆರ್ಕ್ಟಿಕ್‌ನವರೆಗೆ ಸಾಗಿ ನಂತರ ಅಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿಸಿಕೊಂಡು ಪುನಃ ಶ್ರೀಲಂಕಾದತ್ತ ಪ್ರಯಾಣಿಸುತ್ತಿತ್ತು. ಮಾರ್ಗ ಮಧ್ಯೆ ಕಾರವಾರದ ಬೀಚ್‌ನಲ್ಲಿ ಹಾರಾಟ ಸ್ಥಗಿತಗೊಂಡಿತು ಎಂದು ಕೊಲಂಬೊದ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಸೀಗಲ್ ವಲಸೆ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ‍್ಯಾಕರ್

ಬೆನ್ನಿನಲ್ಲಿದ್ದ ಜಿಪಿಎಸ್ ಟ್ರ್ಯಾಕರ್: ಸೀಗಲ್ ಹಕ್ಕಿಯಲ್ಲಿ ಶ್ರೀಲಂಕಾ ಪಕ್ಷಿ ತಜ್ಞರು ಅಳವಡಿಸಿದ್ದ ಜಿಪಿಎಸ್ ಟ್ರ್ಯಾಕರ್ ಕಂಡುಬಂದಿತ್ತು‌. ಕಾರವಾರದ ತಿಮ್ಮಕ್ಕ ಗಾರ್ಡನ್ ಹಿಂಬದಿಯಲ್ಲಿ ಕೂತಿದ್ದ ಸೀಗಲ್ ಹಕ್ಕಿಯ ಬೆನ್ನಿನ ಭಾಗದಲ್ಲಿ ಜಿಪಿಎಸ್ ಟ್ರ್ಯಾಕರ್ ಕಂಡುಬಂದಿತ್ತು. ಭಿನ್ನವಾಗಿ ಕಂಡ ಈ ಹಕ್ಕಿಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಮರೈನ್ ಕಡಲ ವಿಭಾಗದ ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದರು.

ಸ್ಥಳಕ್ಕೆ‌ ಬಂದ ಅಧಿಕಾರಿಗಳು ಹಕ್ಕಿಯನ್ನು ಹಿಡಿದು ಪರಿಶೀಲಿಸಿದರು. ಹಕ್ಕಿಯ ಬೆನ್ನಿನಲ್ಲಿದ್ದ ಜಿಪಿಎಸ್‌ನಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್ ವಿಳಾಸವಿತ್ತು. ಶ್ರೀಲಂಕಾ ವನ್ಯಜೀವಿ ಸಂಶೋಧನಾ ಮಂಡಳಿ ಈ ಸೀಗಲ್ ಹಕ್ಕಿಗಳ ಚಲನವಲನ, ಆಹಾರ ಹಾಗೂ ವಲಸೆಯನ್ನು ಗುರುತಿಸಲು ಜಿಪಿಎಸ್ ಟ್ರ್ಯಾಕರ್ ಬಳಸಿದ್ದರು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಕ್ಕಿಗೆ ಗಾಯವಾದ ಕಾರಣ ಅದು ಹಾರಲಾಗದ ಸ್ಥಿತಿಯಲ್ಲಿತ್ತು‌.

Previous articleಬಿಸಿಯೂಟದಲ್ಲಿ ಹುಳು ಪತ್ತೆ: ಪ್ರಭಾರಿ ಮುಖ್ಯ ಶಿಕ್ಷಕ ಅಮಾನತು
Next article20 ಕೋಟಿ ರೂ. ಮೌಲ್ಯದ ಸ್ವತ್ತು ವಾರಸುದಾರರಿಗೆ ಹಸ್ತಾಂತರ