ಪ್ರತಿಭಟನೆ ನಡುವೆಯೇ ಲೋಕಸಭೆಯಲ್ಲಿ ‘VB-G RAM G’ ಮಸೂದೆ ಅಂಗೀಕಾರ

0
5

ನರೇಗಾ ಬದಲಿಸುವ ಹೊಸ ಉದ್ಯೋಗ ಖಾತರಿ ಯೋಜನೆಗೆ ಧ್ವನಿ ಮತದ ಮೂಲಕ ಒಪ್ಪಿಗೆ

ನವದೆಹಲಿ: 20 ವರ್ಷಗಳ ಇತಿಹಾಸ ಹೊಂದಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಯನ್ನು ಬದಲಿಸುವ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ)’ (ವಿಬಿ–ಜಿ ರಾಮ್ ಜಿ) ಮಸೂದೆಗೆ ಲೋಕಸಭೆ ಗುರುವಾರ ಅಂಗೀಕಾರ ನೀಡಿತು. ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆ, ಗದ್ದಲ ಮತ್ತು ಧರಣಿಗಳ ನಡುವೆಯೇ ಧ್ವನಿ ಮತದ ಮೂಲಕ ಮಸೂದೆ ಅಂಗೀಕಾರಗೊಂಡಿತು.

ಮಸೂದೆ ಕುರಿತು ಸುಮಾರು 8 ಗಂಟೆಗಳ ಕಾಲ ನಡೆದ ಚರ್ಚೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಮೋದಿ ಸರ್ಕಾರವು ಮಹಾತ್ಮಾಗಾಂಧಿ ಅವರ ಚಿಂತನೆಗಳನ್ನು ಕೇವಲ ಹೆಸರಿನಲ್ಲಲ್ಲ, ಕಾರ್ಯರೂಪದಲ್ಲೇ ಜೀವಂತವಾಗಿಟ್ಟಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: ತೀವ್ರ ವಿರೋಧದ ನಡುವೆಯೇ ದ್ವೇಷ ಭಾಷಣ ವಿಧೇಯಕ ಅಂಗೀಕಾರ

‘ಬಾಪುವಿನ ಚಿಂತನೆಗಳನ್ನು ಕಾಂಗ್ರೆಸ್ ಕೊಂದಿದೆ’ – ಶಿವರಾಜ್ ಸಿಂಗ್ ಚೌಹಾಣ್: ಚರ್ಚೆ ವೇಳೆ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಚೌಹಾಣ್, ಬಾಪುವಿನ ಚಿಂತನೆಗಳನ್ನು ಕಾಂಗ್ರೆಸ್ ಕೊಂದಿದೆ. ಆದರೆ ಎನ್‌ಡಿಎ ಸರ್ಕಾರ ಪಿಎಂ ಆವಾಸ್ ಯೋಜನೆಯಡಿ ನಿರ್ಮಿಸಿದ ಪಕ್ಕಾ ಮನೆಗಳು, ಉಜ್ವಲ ಯೋಜನೆಯ ಗ್ಯಾಸ್ ಸಂಪರ್ಕ, ಸ್ವಚ್ಛ ಭಾರತ ಮಿಷನ್, ಆಯುಷ್ಮಾನ್ ಭಾರತ್ ಮುಂತಾದ ಜನಪರ ಯೋಜನೆಗಳ ಮೂಲಕ ಮಹಾತ್ಮಾಗಾಂಧಿಯನ್ನು ಜೀವಂತವಾಗಿಟ್ಟಿದೆ ಎಂದು ಹೇಳಿದರು.

ವಿಬಿ–ಜಿ ರಾಮ್ ಜಿ ಮಸೂದೆ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಉದ್ಯೋಗವಷ್ಟೇ ಅಲ್ಲದೆ, ಜೀವನೋಪಾಯ, ಕೌಶಲ್ಯಾಭಿವೃದ್ಧಿ ಮತ್ತು ದೀರ್ಘಕಾಲಿಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ ಎಂದು ಅವರು ಸಮರ್ಥಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಔಟ್‌ಗೋಯಿಂಗ್‌ ಚೀಫ್‌ ಮಿನಿಸ್ಟರ್‌

ಮಹಾತ್ಮಾಗಾಂಧಿ ಹೆಸರನ್ನು ತೆಗೆದುಹಾಕಿದುದಕ್ಕೆ ಭಾರಿ ವಿರೋಧ: ಯೋಜನೆಯ ಹೆಸರಿನಿಂದ ಮಹಾತ್ಮಾಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಸಂಸದರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಕೆಲವರು ಮಸೂದೆಯ ಪ್ರತಿಗಳನ್ನು ಹರಿದು ಸ್ಪೀಕರ್‌ ಕುರ್ಚಿಯತ್ತ ತೂರಿದ ಘಟನೆ ಕೂಡ ನಡೆಯಿತು.

ಗದ್ದಲದ ನಡುವೆಯೂ ಧ್ವನಿ ಮತದಿಂದ ಅಂಗೀಕಾರ: ಸದನದಲ್ಲಿ ನಿರಂತರ ಗದ್ದಲ, ಘೋಷಣೆಗಳ ನಡುವೆಯೂ ಸ್ಪೀಕರ್ ಅವರು ಧ್ವನಿ ಮತದ ಮೂಲಕ ಮಸೂದೆಗೆ ಒಪ್ಪಿಗೆ ಪಡೆದುಕೊಂಡರು. ಮಸೂದೆ ಅಂಗೀಕಾರವಾದ ತಕ್ಷಣ ದಿನದ ಕಲಾಪವನ್ನು ಮುಂದೂಡಿದರು. ವಿಬಿ–ಜಿ ರಾಮ್ ಜಿ ಮಸೂದೆ ಅಂಗೀಕಾರದೊಂದಿಗೆ ನರೇಗಾ ಯುಗಕ್ಕೆ ತೆರೆ ಬಿದ್ದು, ಗ್ರಾಮೀಣ ಉದ್ಯೋಗ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೆ, ವಿರೋಧ ಪಕ್ಷಗಳು ಇದನ್ನು ಐತಿಹಾಸಿಕ ಜನಪರ ಯೋಜನೆ ದುರ್ಬಲಗೊಳಿಸುವ ಪ್ರಯತ್ನ ಎಂದು ಟೀಕಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಮಸೂದೆ ದೇಶದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

Previous articleವಾಯುಮಾಲಿನ್ಯಕ್ಕೆ ತತ್ತರಿಸಿದ ದೆಹಲಿ: ಹಳೆಯ ಕಾರುಗಳಿಗೆ ನೋ ಎಂಟ್ರಿ