ಮೈಕ್ರೋ ಫೈನಾನ್ಸ್ ಕಿರುಕುಳ ಖಂಡನೆ: ಸುವರ್ಣಸೌಧದ ಬಳಿ ರೈತ ಸಂಘದ ಧರಣಿಗೆ ಸಚಿವ ಎಂ.ಬಿ. ಪಾಟೀಲ್ ಭೇಟಿ – ಕಟ್ಟುನಿಟ್ಟಿನ ಕ್ರಮದ ಭರವಸೆ
ಬೆಳಗಾವಿ (ಸುವರ್ಣಸೌಧ): ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಕೆಲವು ಸಂಘಟನೆಗಳು ರೈತರ ಮೇಲೆ ನಡೆಸುತ್ತಿರುವ ಗುಂಡಾವರ್ತನೆ, ಮಾನಸಿಕ ಕಿರುಕುಳ ಮತ್ತು ಅಕ್ರಮ ಹಣ ವಸೂಲಾತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ (ರಿ) ರಾಣೆಬೆನ್ನೂರು ತಾಲ್ಲೂಕು ಘಟಕದ ವತಿಯಿಂದ ಸುವರ್ಣಸೌಧದ ಬಳಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಭೇಟಿ ನೀಡಿ, ರೈತರ ಅಹವಾಲು ಆಲಿಸಿ ಮನವಿಯನ್ನು ಸ್ವೀಕರಿಸಿದರು.
ಧರಣಿಯಲ್ಲಿ ಭಾಗವಹಿಸಿದ್ದ ರೈತರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ, ಬೆದರಿಕೆ ಹಾಗೂ ಆತ್ಮಹತ್ಯೆಗೆ ದಾರಿ ಮಾಡಿಕೊಡುವಂತಹ ಕಿರುಕುಳಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ವಿಶೇಷವಾಗಿ ಗಡಿಭಾಗ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೆರೆ ರಾಜ್ಯಗಳ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ವ್ಯವಹಾರ ನಡೆಸುತ್ತಿರುವುದು ರೈತರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮಹಾತ್ಮ ಗಾಂಧೀಜಿ ಹೆಸರನ್ನು ಅಳಿಸಿ ಗ್ರಾಮೀಣರ ಹಕ್ಕು ಕಸಿಯುವ VB-G RAM G ಬಿಲ್: ಸಚಿವ ಎಂ.ಬಿ. ಪಾಟೀಲ್ ಕಿಡಿ
ಸುಗ್ರೀವಾಜ್ಞೆ ಮೂಲಕ ಕಟ್ಟುನಿಟ್ಟಿನ ಕ್ರಮ: ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ರೈತರಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸುವ ಉದ್ದೇಶದಿಂದ ನಮ್ಮ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕಾನೂನು ಉಲ್ಲಂಘಿಸಿ ರೈತರನ್ನು ಹಿಂಸಿಸುವ ಯಾವುದೇ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಅಕ್ರಮ ವ್ಯವಹಾರಗಳಿಗೆ ಬ್ರೇಕ್: ನೆರೆ ರಾಜ್ಯಗಳ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ರಾಜ್ಯದ ಗಡಿಭಾಗಗಳಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳು ಸಾಲಗಾರರ ಮೇಲೆ ಒತ್ತಡ, ಬೆದರಿಕೆ ಹಾಗೂ ಅವಮಾನಕಾರಿ ವರ್ತನೆ ನಡೆಸುತ್ತಿರುವ ದೂರುಗಳು ಬಂದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಮೂಲಕ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ: 1600 PSI ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ: ಡಾ.ಜಿ.ಪರಮೇಶ್ವರ್
ರೈತರ ಪರ ಸರ್ಕಾರ ಬದ್ಧ: ನಮ್ಮ ಸರ್ಕಾರ ಸಂಪೂರ್ಣವಾಗಿ ರೈತರ ಪರವಾಗಿದೆ. ರೈತರ ಹಿತಾಸಕ್ತಿಯ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗಲು ಸರ್ಕಾರ ಹಿಂದೇಟು ಹಾಕುವುದಿಲ್ಲ. ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿ ಇನ್ನಷ್ಟು ತೀಕ್ಷ್ಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಂ.ಬಿ. ಪಾಟೀಲ್ ಹೇಳಿದರು.
ಧರಣಿ ಕೈಬಿಡುವಂತೆ ಮನವಿ: ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಭರವಸೆಯನ್ನು ನೀಡಿದ ಸಚಿವರು, ಈ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಡುವಂತೆ ರೈತ ಸಂಘದ ಮುಖಂಡರಿಗೆ ಮನವಿ ಮಾಡಿದರು. ಸರ್ಕಾರದ ಕ್ರಮಗಳ ಮೇಲೆ ನಂಬಿಕೆ ಇಟ್ಟು, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.























