Home ನಮ್ಮ ಜಿಲ್ಲೆ ದಾವಣಗೆರೆ ಶತಮಾನಗಳ ಪರಂಪರೆ: ಜಾತ್ರೆಗೆ ಪುರುಷರಿಗೆ ಮಾತ್ರ ಅವಕಾಶ

ಶತಮಾನಗಳ ಪರಂಪರೆ: ಜಾತ್ರೆಗೆ ಪುರುಷರಿಗೆ ಮಾತ್ರ ಅವಕಾಶ

0
10

ದಾವಣಗೆರೆ: ದಾವಣಗೆರೆ ನಗರದ ಹೊರವಲಯದ ಬಸಾಪುರ ಗ್ರಾಮದಲ್ಲಿ ಮಹೇಶ್ವರಸ್ವಾಮಿ ಜಾತ್ರೆ ಪುಷ್ಯ ಮಾಸದ ಎಳ್ಳು ಅಮವಾಸ್ಯೆ ಸಂದರ್ಭದಲ್ಲಿ ವಿಜೃಂಭಣೆಯಿಂದ ಜರುಗಿದೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಆದರೆ ಈ ಜಾತ್ರೆಯಲ್ಲೊಂದು ವಿಶಿಷ್ಟ ಹಾಗೂ ವಿಭಿನ್ನ ಸಂಪ್ರದಾಯವಿದೆ. ಮಹೇಶ್ವರಸ್ವಾಮಿ ಜಾತ್ರೆಗೆ ಪುರುಷರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಹಿಳೆಯರಿಗೆ ಜಾತ್ರೆ ಮತ್ತು ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುವ ಅವಕಾಶವಿಲ್ಲ. ಈ ಪದ್ಧತಿ ಕಳೆದ 50–60 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ವಿಳಂಬ: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ

ನಾಲ್ಕು ಶತಮಾನಗಳ ಇತಿಹಾಸ ಹೊಂದಿರುವ ಮಹೇಶ್ವರಸ್ವಾಮಿ ಪೂಜೆ: ಬಸಾಪುರ ಗ್ರಾಮದಲ್ಲಿ ಮಹೇಶ್ವರಸ್ವಾಮಿ ಪೂಜೆ ಕಳೆದ ನಾಲ್ಕು ಶತಮಾನಗಳಿಂದ ನಡೆಯುತ್ತ ಬಂದಿದ್ದು, ದೊಡ್ಡ ಮರದ ಕೆಳಗೆ, ಸುತ್ತಲೂ ಭತ್ತದ ಗದ್ದೆಗಳಿಂದ ಆವರಿಸಲ್ಪಟ್ಟ ಪ್ರದೇಶದಲ್ಲಿ ದೇವರು ನೆಲೆಸಿದ್ದಾರೆ. ವರ್ಷಕ್ಕೆ ಒಂದೇ ಬಾರಿ ನಡೆಯುವ ಈ ಜಾತ್ರೆಗೆ ಗ್ರಾಮಸ್ಥರು ಅಪಾರ ಭಕ್ತಿ-ಶ್ರದ್ಧೆಯಿಂದ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಜಾತ್ರೆಯ ಸಮಯದಲ್ಲಿ ಅಥವಾ ವಿಶೇಷ ಪೂಜೆ ನಡೆಯುವ ಸಂದರ್ಭದಲ್ಲಿ ಮಹಿಳೆಯರು ದೇವಾಲಯದ ಆವರಣಕ್ಕೆ ಪ್ರವೇಶಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸಲಾಗುತ್ತಿದೆ. ಗ್ರಾಮ ಪರಂಪರೆ ಪ್ರಕಾರ, ಈ ನಿಯಮ ಉಲ್ಲಂಘನೆಯಾದಲ್ಲಿ ಅಪಾಯ ಅಥವಾ ಅಶುಭ ಸಂಭವಿಸಬಹುದು ಎಂಬ ನಂಬಿಕೆ ಇದೆ ಎಂದು ಹಿರಿಯರು ಹೇಳುತ್ತಾರೆ.

ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡೀಪಾರು ಆದೇಶ

ಅಪರೂಪದ ಆಚರಣೆಗಳು, ನಂಬಿಕೆಗಳು: ಜಾತ್ರೆಯ ಸಂದರ್ಭದಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತವೆ. ಪೂಜಾರಿ ಪುಷ್ಕರಣಿಯಲ್ಲಿ ಬಾಳೆಹಣ್ಣಿನ ಸಿಪ್ಪೆಗಳನ್ನು ವಿಸರ್ಜನೆ ಮಾಡುತ್ತಾರೆ. ಬಾಳೆಹಣ್ಣಿನ ಸಿಪ್ಪೆಗಳು ನೀರಿನಲ್ಲಿ ತೇಲಿದರೆ ಗ್ರಾಮಕ್ಕೆ ಒಳಿತು, ಅವು ಮುಳುಗಿದರೆ ಆಪತ್ತು ಎದುರಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

ಇದೇ ವೇಳೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನ್ನದಾನ ಸೇವೆ ಕೂಡ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ವ ಜನಾಂಗದ ಪುರುಷ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದು ಹರಕೆ ತೀರಿಸುತ್ತಿದ್ದಾರೆ.

ಸಂಪ್ರದಾಯ ಮತ್ತು ಆಧುನಿಕ ಚರ್ಚೆ: ಮಹಿಳೆಯರಿಗೆ ಪ್ರವೇಶವಿಲ್ಲದ ಈ ಸಂಪ್ರದಾಯದ ಕುರಿತು ಕೆಲವೊಂದು ಚರ್ಚೆಗಳು ನಡೆಯುತ್ತಿದ್ದರೂ, ಗ್ರಾಮಸ್ಥರು ಇದನ್ನು ಪಾರಂಪರಿಕ ನಂಬಿಕೆ ಮತ್ತು ಸಂಸ್ಕೃತಿಯ ಭಾಗ ಎಂದು ಪರಿಗಣಿಸುತ್ತಿದ್ದಾರೆ. ಸಂಪ್ರದಾಯವನ್ನು ಮುಂದುವರಿಸುವುದೇ ದೇವರ ಕೃಪೆಗೆ ಕಾರಣ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಗಟ್ಟಿಯಾಗಿದೆ.