Home ನಮ್ಮ ಜಿಲ್ಲೆ ಉತ್ತರ ಕನ್ನಡ ಸೀಗಲ್ ವಲಸೆ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ‍್ಯಾಕರ್

ಸೀಗಲ್ ವಲಸೆ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ‍್ಯಾಕರ್

0
29

ಕಾರವಾರ: ಪ್ರತಿ ವರ್ಷವೂ ಚಳಿಗಾಲದ ವೇಳೆಗೆ ವಿದೇಶಗಳಿಂದ ವಲಸೆ ಬರುವ ಸೀಗಲ್ (ಸಮುದ್ರದ ಹಕ್ಕಿ) ಹಕ್ಕಿಯೊಂದರಲ್ಲಿ ಚೀನಾ ಮೂಲದ ಜಿಪಿಎಸ್ ಟ್ರ‍್ಯಾಕರ್ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಕಾರವಾರ ನೌಕಾನೆಲೆಗೆ ಹೊಂದಿಕೊಂಡಿರುವ ಸೂಕ್ಷ್ಮ ಪ್ರದೇಶದಲ್ಲಿ ಈ ಹಕ್ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಮತ್ತು ನೌಕಾದಳದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ನಗರದ ಕರಾವಳಿ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈ ಸೀಗಲ್ ಹಕ್ಕಿಯನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅದನ್ನು ಚಾಣಾಕ್ಷತನದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಕ್ಕಿಯ ಕಾಲಿಗೆ ಅಳವಡಿಸಲಾಗಿದ್ದ ಅತ್ಯಾಧುನಿಕ ಜಿಪಿಎಸ್ ಟ್ರ‍್ಯಾಕರ್ ಅನ್ನು ಪರಿಶೀಲಿಸಿದಾಗ, ಅದರ ಮೇಲೆ ಚೀನಾ ವಿಜ್ಞಾನ ಅಕಾಡೆಮಿಯ ‘ಇಕೋ-ಎನ್ವಿರಾನ್‌ಮೆಂಟ್ ಸೈನ್ಸ್’ (Chinese Academy of Sciences – Eco-Environment Science) ಎಂಬ ಬರಹ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸೀಗಲ್ ಹಕ್ಕಿಗಳ ಚಲನವಲನ, ಆಹಾರ ಪದ್ಧತಿ ಹಾಗೂ ಅವುಗಳ ವಲಸೆ ಮಾರ್ಗಗಳ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಲು ಈ ಟ್ರ‍್ಯಾಕರ್ ಅಳವಡಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಹಕ್ಕಿ ಪತ್ತೆಯಾದ ಸ್ಥಳವು ಭಾರತದ ಪ್ರಮುಖ ನೌಕಾನೆಲೆಯಾದ `ಐಎನ್‌ಎಸ್ ಕದಂಬ’ಗೆ ಅತ್ಯಂತ ಸಮೀಪದಲ್ಲಿರುವುದರಿಂದ, ಇದನ್ನು ಕೇವಲ ವೈಜ್ಞಾನಿಕ ಉದ್ದೇಶಕ್ಕೆ ಅಳವಡಿಸಲಾಗಿದೆಯೇ ಅಥವಾ ಬೇರೆನಾದರೂ ಉದ್ದೇಶವಿದೆಯೇ ಎಂಬ ನಿಟ್ಟಿನಲ್ಲಿ ರಕ್ಷಣಾ ಸಂಸ್ಥೆಗಳು ಜಾಗೃತಗೊಂಡಿವೆ.

ಇದನ್ನೂ ಓದಿ: ಪುರಸಭೆ ಯಡವಟ್ಟು: ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ

ಪ್ರಸ್ತುತ ಅರಣ್ಯ ಇಲಾಖೆಯ ಅಧಿಕಾರಿಗಳು ಸೀಗಲ್ ಅನ್ನು ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ಸುರಕ್ಷಿತವಾಗಿರಿಸಿದ್ದು, ಟ್ರ‍್ಯಾಕರ್ ಮೇಲಿರುವ ವಿಳಾಸದ ಆಧಾರದ ಮೇಲೆ ಚೀನಾದ ಸಂಬಂಧಿತ ಅಕಾಡೆಮಿಯನ್ನು ಸಂಪರ್ಕಿಸಲು ಮುಂದಾಗಿದ್ದಾರೆ. ಘಟನೆಯ ಗಾಂಭೀರ್ಯವನ್ನು ಪರಿಗಣಿಸಿ ಕಾರವಾರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನೌಕಾದಳದ ಅಧಿಕಾರಿಗಳು ಸಹ ತನಿಖೆಯಲ್ಲಿ ಕೈಜೋಡಿಸಿದ್ದಾರೆ. ಗಡಿ ಭಾಗದ ಭದ್ರತೆಯ ದೃಷ್ಟಿಯಿಂದ ಈ ಹಕ್ಕಿಯ ಹಾರಾಟದ ಹಾದಿಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಅತ್ಯಂತ ಚಾಣಾಕ್ಷ ಹಕ್ಕಿಗಳು: ಪ್ರತಿ ವರ್ಷವೂ ನವೆಂಬರ್ ವೇಳೆಗೆ ಕರಾವಳಿಯ ಕಡಲತೀರಕ್ಕೆ ಈ ವಲಸೆ ಹಕ್ಕಿಗಳು ಆಗಮಿಸುವುದು ಸಾಮಾನ್ಯವಾಗಿದೆ. ಶೀತ ಪ್ರದೇಶಗಳಾದ ಯುರೋಪ್, ಉತ್ತರ ಏಷ್ಯಾ (ಸೈಬೀರಿಯಾ) ಮತ್ತು ಚೀನಾ ಭಾಗಗಳಿಂದ ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣ ಹುಡುಕಿಕೊಂಡು ಭಾರತದ ಪಶ್ಚಿಮ ಕರಾವಳಿಗೆ ವಲಸೆ ಬರುತ್ತವೆ. ಪ್ರತಿ ವರ್ಷ ನವೆಂಬರ್‌ನಿಂದ ಮಾರ್ಚ್ ತಿಂಗಳವರೆಗೆ ಕಡಲತೀರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸೀಗಲ್‌ಗಳು ಅತ್ಯಂತ ಚಾಣಾಕ್ಷ ಹಕ್ಕಿಗಳು. ಇವು ಗುಂಪುಗಳಲ್ಲಿ ವಾಸಿಸುವುದು ಪ್ರತಿವರ್ಷವೂ ಕರಾವಳಿ ತೀರದಲ್ಲಿ ಕಂಡುಬರುತ್ತದೆ.