Home ನಮ್ಮ ಜಿಲ್ಲೆ ಧಾರವಾಡ ಅರಳುವ ಮುನ್ನವೇ ಕಮರಿದ ಮೂರು ಎಳೆಯ ಕನಸುಗಳು

ಅರಳುವ ಮುನ್ನವೇ ಕಮರಿದ ಮೂರು ಎಳೆಯ ಕನಸುಗಳು

0
29

ಹೆತ್ತವರ ಕಣ್ಮುಂದೆ ಮಕ್ಕಳು ಬೆಟ್ಟದಷ್ಟು ಕನಸು ಹೊತ್ತು ಊರ ಬಿಟ್ಟು ಪೇಟೆಗೆ ಹೋಗ್ತಾರೆ. ನನ್ನ ಮಗಳು ಆಫೀಸರ್ ಆಗ್ತಾಳೆ, ನಮ್ ಕಷ್ಟ ಕಲಿತಾಳೆ ಅಂತ ಅಪ್ಪ-ಅಮ್ಮ ಅಂದುಕೊಳ್ತಿದ್ರೆ, ಅಲ್ಲಿ ವಿಧಿ ಬೇರೆಯದ್ದೇ ಆಟ ಆಡಿ ಬಿಡುತ್ತೆ.

ಇವತ್ತು ನಾವು ಹೇಳೋ ಸುದ್ದಿ ನಿಮ್ಮ ಕರುಳು ಹಿಂಡುತ್ತೆ. ಒಂದೇ ದಿನ.. ಮೂರು ಬೇರೆ ಬೇರೆ ಕಡೆ.. ಮೂವರು ಯುವತಿಯರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅದ್ರಲ್ಲೂ ಧಾರವಾಡದಲ್ಲಿ ನಡೆದ ಆ ಘಟನೆ ಇದೆಯಲ್ಲ? ಅದು ಕೇವಲ ಸಾವಲ್ಲ, ಅದು ವ್ಯವಸ್ಥೆ ಮತ್ತು ಸಂಬಂಧಗಳ ನಡುವೆ ನಲುಗಿದ ಜೀವದ ಕಥೆ.

ಈಕೆ ಸಾಯುವ ಮುನ್ನ ಬರೆದಿಟ್ಟ ಆ ಎರಡು ಪತ್ರಗಳಲ್ಲಿ ಏನಿತ್ತು? ಆಕೆ ಪ್ರಾಣ ಬಿಡಲು ಕಾರಣ ಕೆಲಸ ಸಿಗಲಿಲ್ಲ ಅಂತಾನಾ? ಅಥವಾ ಆಕೆಯ ಪ್ರೀತಿ ಸೋಲ್ತಾ? ಬನ್ನಿ, ಆ ಕಣ್ಣೀರಿನ ಕಥೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೇವಿ ನೋಡಿ.

ಧಾರವಾಡ.. ವಿದ್ಯಾವಂತರ ಕಾಶಿ. ಉತ್ತರ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳ ಪಾಲಿನ ಭವಿಷ್ಯದ ಬಾಗಿಲು. ಬಳ್ಳಾರಿ ಮೂಲದ 24 ವರ್ಷದ ಪಲ್ಲವಿ ಕೂಡ ಇಲ್ಲಿಗೆ ಬಂದಿದ್ದು ದೊಡ್ಡ ಕನಸುಗಳನ್ನ ಹೊತ್ತುಕೊಂಡು.

ಇದನ್ನೂ ಓದಿ: ಪೋಕ್ಸೋ ಕೇಸ್: ಮ್ಯೂಸಿಕ್ ಮೈಲಾರಿ 14 ದಿನ ನ್ಯಾಯಾಂಗ ವಶಕ್ಕೆ

ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಸರ್ಕಾರಿ ಕೆಲಸ ಗಿಟ್ಟಿಸಬೇಕು ಅನ್ನೋ ಛಲ ಆಕೆಯದಾಗಿತ್ತು. ಆದ್ರೆ, ಡಿಸೆಂಬರ್ 17ರಂದು ನಡೆದಿದ್ದು ಮಾತ್ರ ದುರಂತ. ಕ್ಯಾರಕೊಪ್ಪದ ರೈಲ್ವೆ ಹಳಿಯ ಮೇಲೆ ಆಕೆಯ ಛಿದ್ರವಾದ ದೇಹ ಪತ್ತೆಯಾಯ್ತು.

ಸುದ್ದಿ ಹಬ್ಬಿದ ತಕ್ಷಣ, ಎಲ್ಲರೂ ಅಂದುಕೊಂಡಿದ್ದು ಒಂದೇ ಮಾತು. “ಪಾಪ, ನೇಮಕಾತಿ ವಿಳಂಬ ಆಯ್ತು, ಕೆಲಸ ಸಿಗಲಿಲ್ಲ ಅಂತ ನೊಂದು ಪ್ರಾಣ ಬಿಟ್ಲು” ಅಂತ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಕಟ್ಟೆ ಒಡೆಯಿತು. ಸರ್ಕಾರವನ್ನ ಜನ ಬೈಯೋಕೆ ಶುರು ಮಾಡಿದ್ರು. ಆದ್ರೆ… ಅಸಲಿ ಸತ್ಯ ಹೊರಬಂದಿದ್ದು ಆಕೆಯ ಪ್ಯಾಂಟ್ ಕಿಸೆಯಲ್ಲಿದ್ದ ಆ ಎರಡು ಪತ್ರಗಳಿಂದ! ಹೌದು, ಪೊಲೀಸರು ಆಕೆಯ ಜೇಬು ತಪಾಸಣೆ ಮಾಡಿದಾಗ ಸಿಕ್ಕಿದ್ದು ಎದೆ ನಡುಗಿಸೋ ಸತ್ಯ.

ಮೊದಲನೇ ಪತ್ರವನ್ನ ಆಕೆ ಬರೆದಿದ್ದು ತನ್ನ ಹೆತ್ತ ತಂದೆ-ತಾಯಿಗೆ. ಆ ಸಾಲುಗಳನ್ನ ಓದಿದ್ರೆ ಎಂಥವರಿಗಾದರೂ ಕಣ್ಣು ಒದ್ದೆಯಾಗುತ್ತೆ. “ಅಪ್ಪಾ, ಅಮ್ಮಾ.. ನೀವ್ಯಾವತ್ತೂ ನನಗೆ ಪ್ರೀತಿ ನೀಡಲಿಲ್ಲ. ಬರೀ ಹಾಸ್ಟೆಲ್ ನಲ್ಲೇ ನನ್ನ ಬೆಳೆಸಿದ್ರಿ. ನನ್ನ ಬೇಕು ಬೇಡಗಳನ್ನ ನೀವು ಕೇಳಲೇ ಇಲ್ಲ…” ಅಂತ ನೊಂದ ಮನಸ್ಸಿನಿಂದ ಬರೆದಿದ್ದಾಳೆ. ತಂದೆ ತಾಯಿಯ ಪ್ರೀತಿಗಾಗಿ ಹಪಹಪಿಸ್ತಿದ್ದ ಆ ಜೀವಕ್ಕೆ ಕೊನೆಗೂ ಸಿಕ್ಕಿದ್ದು ಒಂಟಿತನ ಮಾತ್ರ.

ಇನ್ನೂ ಎರಡನೇ ಪತ್ರ.. ಅದು ಆಕೆಯ ರೂಮಿನಲ್ಲಿ ಸಿಕ್ಕಿತ್ತು. ಅದು ಬರೆದಿದ್ದು ಆಕೆ ಪ್ರೀತಿಸುತ್ತಿದ್ದ ಹುಡುಗನಿಗೆ. ಬಳ್ಳಾರಿ ತಾಲೂಕಿನ ಕಗ್ಗಲ್ಲು ಗ್ರಾಮದ ಯುವಕನನ್ನ ಪಲ್ಲವಿ ಪ್ರೀತಿಸ್ತಿದ್ಲು. ಆದ್ರೆ ವಿಧಿ ಇಲ್ಲೂ ಕೂಡ ಅಡ್ಡ ಬಂತು. ಜಾತಿ ಅಥವಾ ಅಂತಸ್ತಿನ ಗೋಡೆಯೋ ಗೊತ್ತಿಲ್ಲ, ಮನೆಯವರು ಈ ಪ್ರೀತಿಗೆ ಒಪ್ಪಿಗೆ ಕೊಡಲಿಲ್ಲ.

ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು: ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು?

ಅಷ್ಟೇ ಅಲ್ಲ ತಾಯಿಯ ಸಂಬಂಧಿಕರ ಜೊತೆ ಮದುವೆ ಮಾಡೋಕೆ ಫಿಕ್ಸ್ ಮಾಡಿದ್ರು. ಇದರಿಂದ ನೊಂದ ಪಲ್ಲವಿ, “ನನ್ನವರು ನಿನ್ನ ಜೊತೆ ಬದುಕೋಕೆ ಬಿಡಲ್ಲ, ನನ್ನ ಸಾವಿಗೆ ನಾನೇ ಕಾರಣ, ಕ್ಷಮಿಸು” ಅಂತ ಬರೆದು, ಆ ರೈಲಿನ ಸದ್ದಿನೊಳಗೆ ತನ್ನ ಪ್ರೀತಿಯನ್ನ, ಕನಸನ್ನ ಶಾಶ್ವತವಾಗಿ ಅಳಿಸಿ ಹಾಕಿಕೊಂಡಿದ್ದಾಳೆ. ಎಂಥಾ ದುರ್ದೈವ ನೋಡಿ, ಓದಿ ಆಫೀಸರ್ ಆಗಿ ಮೆರೆಯಬೇಕಾದವಳು, ಪ್ರೀತಿ ಮತ್ತು ಪೋಷಕರ ವಾತ್ಸಲ್ಯ ಸಿಗದೇ ಕಮರಿ ಹೋದಳು.

ಧಾರವಾಡದ ಕಥೆ ಹೀಗಾದ್ರೆ, ಇತ್ತ ಮಲೆನಾಡಿನ ಶಿವಮೊಗ್ಗದಲ್ಲೂ ಅಂತದ್ದೇ ಒಂದು ಘೋರ ಘಟನೆ ನಡೆದಿದೆ. ಹೊಸನಗರದ ಕೊಡಚಾದ್ರಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ‘ರಚನಾ’ ಅನ್ನೋ 20 ವರ್ಷದ ಲವಲವಿಕೆಯ ಹುಡುಗಿ. ಅವತ್ತು ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದಾಳೆ. ಮನೆಯಲ್ಲಿ ಯಾರೂ ಇರಲಿಲ್ಲ. ಅದೇ ಏಕಾಂತವನ್ನ ಆಕೆ ಸಾವಿಗೆ ದಾರಿಯನ್ನಾಗಿ ಮಾಡ್ಕೊಂಡ್ಲು.

ಮನೆಯವರು ಬಂದು ನೋಡುವಷ್ಟರಲ್ಲಿ, ಆ ಚಂದದ ಹುಡುಗಿ ಇಹಲೋಕ ತ್ಯಜಿಸಿದ್ಲು. ಯಾಕೆ? ಏನಾಯ್ತು? ಯಾರಿಗೂ ಗೊತ್ತಿಲ್ಲ. ಅಲ್ಲಿ ಯಾವುದೇ ಪತ್ರ ಸಿಕ್ಕಿಲ್ಲ, ಕಾರಣವೂ ಸಿಕ್ಕಿಲ್ಲ. ಓದು, ಆಟ, ಪಾಠ ಎಲ್ಲದರಲ್ಲೂ ಮುಂದಿದ್ದ ಹುಡುಗಿ, ದಿಢೀರನೆ ಇಂಥಾ ಕಠೋರ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಅನ್ನೋದು ಇನ್ನೂ ನಿಗೂಢ. ಆ ಮನೆಯಲ್ಲಿ ಈಗ ಬರೀ ಮೌನ, ಮತ್ತು ಉತ್ತರ ಸಿಗದ ಪ್ರಶ್ನೆಗಳು ಮಾತ್ರ ಉಳಿದಿವೆ.

ಇವರಿಬ್ಬರು ತಾವಾಗಿಯೇ ಸಾವನ್ನ ಅಪ್ಪಿಕೊಂಡ್ರೆ, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ವಿಧಿಯೇ ಒಂದು ಮಗುವನ್ನ ಕಿತ್ತುಕೊಂಡು ಬಿಡ್ತು. 22 ವರ್ಷದ ದಿಶಾ.. ಪದವಿ ಮುಗಿಸಿ ಇನ್ನೇನು ಕೆಲಸಕ್ಕೆ ಸೇರಬೇಕು, ಅಪ್ಪ ಅಮ್ಮನನ್ನ ಸಾಕ್ಬೇಕು ಅಂತ ಕನಸು ಕಂಡಿದ್ಲು. ಹಾಸ್ಟೆಲ್ ನಲ್ಲಿ ನಗ್ತಾ ನಗ್ತಾ ಇದ್ದವಳು, ಇದ್ದಕ್ಕಿದ್ದಂತೆ ಎದೆ ನೋವು ಅಂತ ಕುಸಿದು ಬಿದ್ದಳು.

ವಯಸ್ಸು ಇನ್ನು 22.. ಈ ವಯಸ್ಸಿಗೆ ಹಾರ್ಟ್ ಅಟ್ಯಾಕ್? ಕೇಳೋದಕ್ಕೆ ನಂಬೋಕೆ ಆಗ್ತಿಲ್ಲ ಅಲ್ವಾ? ಆದ್ರೆ ವಿಧಿ ಆಟದ ಮುಂದೆ ಮನುಷ್ಯನ ಹಟ ನಡೆಯಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ಕ್ಷಣಾರ್ಧದಲ್ಲಿ ಆಕೆಯ ಉಸಿರು ನಿಂತೇ ಹೋಯ್ತು. ಶಿವಮೊಗ್ಗದ ತೀರ್ಥಹಳ್ಳಿಯಿಂದ ಓದೋಕೆ ಬಂದ ಮಗಳ ಹೆಣವನ್ನ ನೋಡೋ ಶಕ್ತಿ ಆ ಪೋಷಕರಿಗೆ ಎಲ್ಲಿಂದ ಬರಬೇಕು?

ಇವತ್ತಿನ ಈ ಮೂರು ಸುದ್ದಿಗಳು ನಮ್ಮನ್ನ ಕಾಡದೇ ಇರಲ್ಲ. ಪಲ್ಲವಿಯ ಒಂಟಿತನ, ರಚನಾಳ ನಿಗೂಢತೆ, ದಿಶಾಳ ವಿಧಿಲೀಲೆ.. ಎಲ್ಲವೂ ನೋವಿನ ಸಂಗತಿಯೇ. ಅದರಲ್ಲೂ ಪಲ್ಲವಿ ತೆಗೆದುಕೊಂಡ ನಿರ್ಧಾರವಂತೂ ಯಾರಿಗೂ ಬೇಡ. ಸಮಸ್ಯೆಗಳು ಏನೇ ಇರಲಿ, ಪ್ರೀತಿ ಸಿಗಲಿ ಸಿಗದೇ ಇರಲಿ, ಪ್ರಾಣ ಕಳೆದುಕೊಳ್ಳುವುದು ಅದಕ್ಕೆ ಪರಿಹಾರ ಅಲ್ಲ. ಇಂದಿನ ಯುವಜನಾಂಗ ಯಾಕೆ ಇಷ್ಟು ದುರ್ಬಲವಾಗ್ತಿದೆ?