ದಾಂಡೇಲಿ: ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಮೂಲಕ ರಾಜ್ಯದ ಆರ್ಥಿಕವಾಗಿ ಹಿಂದುಳಿದ, ಪ್ರತಿಭಾನ್ವಿತ ಈಡಿಗ ಹಾಗೂ 26 ಉಪಪಂಗಡಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಜೆಪಿಎನ್‌ಪಿ ವಿದ್ಯಾರ್ಥಿವೇತನವನ್ನು ನಮ್ಮಲ್ಲಿನ ಕೆಲವರು ಸಾಮಾಜಿಕ ಗಣತಿ ವೇಳೆ ಹುಟ್ಟು ಹಾಕಿದ ಗೊಂದಲಗಳಿಂದ ನಿರಾಕರಿಸಲಾಗಿದೆ ಎಂದು ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ ಉತ್ತರ ಕನ್ನಡ ಜಿಲ್ಲಾ ಘಟಕದ ಜಿಲ್ಲಾ ಮುಖ್ಯ ಸಂಚಾಲಕ ಡಾ. ನಾಗೇಶ ನಾಯ್ಕ ಹೇಳಿದರು.
ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ನಾಮಧಾರಿಗಳು ಈಡಿಗ ಸಮುದಾಯವನ್ನು ಬಲವಾಗಿ ನಂಬಿಕೊಂಡು ಬಂದವರಾಗಿದ್ದಾರೆ. ಪ್ರತಿಷ್ಠಾನವು ಯಾವುದೇ ವ್ಯಕ್ತಿಗಳ ಮಾತನ್ನು ಆಲಿಸದೆ, ಜಿಲ್ಲೆಯ ನಾಮಧಾರಿ, ಈಡಿಗ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೆಪಿಎನ್‌ಪಿ ವಿದ್ಯಾರ್ಥಿವೇತನ ಮುಂದುವರೆಸುವಂತೆ ವಿನಂತಿಸಿದರು.
ಇದನ್ನೂ ಓದಿ: ಪೋಕ್ಸೋ ಕೇಸ್: ಮ್ಯೂಸಿಕ್ ಮೈಲಾರಿ 14 ದಿನ ನ್ಯಾಯಾಂಗ ವಶಕ್ಕೆ
ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಮೂಲಕ ಕಳೆದ ಏಳು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ 120ಕ್ಕೂ ಅಧಿಕ ಪ್ರತಿಭಾನ್ವಿತರಿಗೆ ಪ್ರತಿವರ್ಷ 7–10 ಲಕ್ಷ ರೂ. ಮೊತ್ತದ ನೆರವು ನೀಡಲಾಗಿದೆ. ಆದರೆ 2025–26ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರತಿಭೆಗಳನ್ನು ನಿರಾಕರಿಸಲಾಗಿದೆ ಎಂದರು.
ಸಮಾಜದ ಕೆಲ ವ್ಯಕ್ತಿಗಳಿಂದಲೇ ಜಿಲ್ಲೆಯ ಬಡ ಹಾಗೂ ಪ್ರತಿಭಾವಂತರಿಗೆ ಸಿಗಬೇಕಾದ ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ನೆರವು ಕೈ ತಪ್ಪುವಂತಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಬೇಕಿದೆ. ನಾಮಧಾರಿ, ದೀವರು, ಈಡಿಗ, ಬಿಲ್ಲವ ಸೇರಿದಂತೆ ವಿವಿಧ ಉಪಪಂಗಡಗಳ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.






















