ಚಳ್ಳಕೆರೆ: ಸ್ಪರ್ಧಾತ್ಮಕ ಕೈಗಾರಿಕಾ ಯುಗದಲ್ಲಿ ನವೀನ ತಂತ್ರಜ್ಞಾನಗಳ ಅಳವಡಿಕೆ ಮತ್ತು ತಾಂತ್ರಿಕ ಉನ್ನತೀಕರಣದ ಅಗತ್ಯತೆಯ ಬಗ್ಗೆ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ಡಿಸೆಂಬರ್ 22 ಮತ್ತು 23 ರಂದು ಚಳ್ಳಕೆರೆ ನಗರದಲ್ಲಿ ಎರಡು ದಿನಗಳ ಕೈಗಾರಿಕಾ ತಾಂತ್ರಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಚಿತ್ರದುರ್ಗ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (KCTU) ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸಂಸ್ಥೆ (ಟೆಕ್ನಾಕ್) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ: Gold Rate: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಮತ್ತೇ ಶಾಕ್!
ನಗರದ ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ಎದುರಿನ ಚೇಂಬರ್ ಆಫ್ ಕಾಮರ್ಸ್ ಸಮುದಾಯ ಭವನದಲ್ಲಿ ಈ ಕಾರ್ಯಾಗಾರ ನಡೆಯಲಿದ್ದು, ಎರಡೂ ದಿನಗಳೂ ಬೆಳಿಗ್ಗೆ 10:30ರಿಂದ ಸಂಜೆ 5:00 ರವರೆಗೆ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.
ಕಾರ್ಯಾಗಾರದಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಿಜಿಟಲೀಕರಣ, ಉತ್ಪಾದನಾ ಪ್ರಕ್ರಿಯೆಗಳ ಸುಧಾರಣೆ, ಶಕ್ತಿ ದಕ್ಷ ತಂತ್ರಜ್ಞಾನಗಳು, ವೆಚ್ಚ ಕಡಿತಗೊಳಿಸುವ ನವೀನ ವಿಧಾನಗಳು, ಸ್ವಯಂಚಾಲಿತ ತಂತ್ರಜ್ಞಾನ, ಗುಣಮಟ್ಟ ಹೆಚ್ಚಿಸುವ ತಾಂತ್ರಿಕ ಪರಿಹಾರಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ತಜ್ಞರಿಂದ ಸಮಗ್ರ ಮಾಹಿತಿ ನೀಡಲಾಗಲಿದೆ.
ಇದನ್ನೂ ಓದಿ: ICSI, CBSE ಸೇರಿದಂತೆ ಎಲ್ಲ ಪಠ್ಯಕ್ರಮ ಶಾಲೆಗಳಲ್ಲಿ ಕನ್ನಡ ಕಡ್ಡಾಯ
ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಎದುರಿಸುತ್ತಿರುವ ತಾಂತ್ರಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಕಾರ್ಯಾಗಾರ ರೂಪಿಸಲಾಗಿದೆ. ಕೈಗಾರಿಕೋದ್ಯಮಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ನಿಲ್ಲಲು ತಾಂತ್ರಿಕ ಉನ್ನತೀಕರಣ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಗಾರ ಬಹುಪಯೋಗಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ತಾಲ್ಲೂಕು ಹಾಗೂ ಜಿಲ್ಲೆಯ ಎಲ್ಲಾ ಕೈಗಾರಿಕೋದ್ಯಮಿಗಳು ಈ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸರ್ಕಾರ ಹಾಗೂ ತಜ್ಞರಿಂದ ಲಭ್ಯವಾಗುವ ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಮನವಿ ಮಾಡಿದ್ದಾರೆ.























