ದಾಂಡೇಲಿ: ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿರುವ ಮಯೂರ ವರ್ಮ ವೇದಿಕೆಯಲ್ಲಿ ಡಿಸೆಂಬರ್ 22ರಿಂದ 28ರವರೆಗೆ ನಡೆಯಲಿರುವ ಕರಾವಳಿ ಉತ್ಸವ–2025ನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಮೀನುಗಾರಿಕೆ, ಬಂದರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಉತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿ ಉತ್ಸವದ ಆಮಂತ್ರಣ ಪತ್ರಿಕೆ ಶಿಷ್ಠಾಚಾರದಂತೆ ಅಂತಿಮಗೊಂಡಿದ್ದು, ತಕ್ಷಣವೇ ಮುದ್ರಣ ಕಾರ್ಯಕ್ಕೆ ಮುಂದಾಗುವಂತೆ ನಿರ್ದೇಶನ ನೀಡಿದರು. ಸಮಯಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ತಾವೇ ಖುದ್ದು ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸುವುದಾಗಿ ಸಚಿವರು ತಿಳಿಸಿದರು.
ಇದನ್ನೂ ಓದಿ: ICSI, CBSE ಸೇರಿದಂತೆ ಎಲ್ಲ ಪಠ್ಯಕ್ರಮ ಶಾಲೆಗಳಲ್ಲಿ ಕನ್ನಡ ಕಡ್ಡಾಯ
ಉತ್ಸವದ ಆಯೋಜನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಅಥವಾ ವಿಳಂಬ ಉಂಟಾಗದಂತೆ ಎಲ್ಲಾ ಸಮಿತಿಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಎಚ್ಚರಿಕೆ ನೀಡಿದರು. ಕರಾವಳಿ ಉತ್ಸವಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರೂ.1 ಕೋಟಿ ಅನುದಾನ ನೀಡಲಾಗುವುದು, ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ.5 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದು ಸಚಿವ ಮಂಕಾಳ ವೈದ್ಯ ಮಾಹಿತಿ ನೀಡಿದರು. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ಸವವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ, ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಈಗಾಗಲೇ ಸಂಗೀತ ಕಾರ್ಯಕ್ರಮಗಳಿಗೆ ಕಲಾವಿದರನ್ನು ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ ಎಂದು ಹೇಳಿದರು. ಅದರಂತೆ,
ಡಿ.22ರಂದು ಶಂಕರ ಮಹಾದೇವನ್,
ಡಿ.23ರಂದು ಮೀಕಾ ಸಿಂಗ್,
ಡಿ.24ರಂದು ಸೋನು ನಿಗಮ್,
ಡಿ.25ರಂದು ರಫ್ತಾರ್,
ಡಿ.27ರಂದು ಮಹಮ್ಮದ್ ದಾನೀಶ್,
ಡಿ.28ರಂದು ದಲೇರಿ ಮೆಹಂದಿ ತಂಡ
ಕರಾವಳಿ ಉತ್ಸವದ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಹೈಕಮಾಂಡ್ ಸೂಚಿಸುವವರೆಗೂ ನಾನೇ ಮುಖ್ಯಮಂತ್ರಿ
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ಕರಾವಳಿ ಉತ್ಸವ–2025 ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಕಲಾ ವೈಭವವನ್ನು ದೇಶದ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.









