ದಾಂಡೇಲಿ: ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಚಾನಕ್ ಸಂಭವಿಸಿದ ಈ ಬೆಂಕಿ ಅವಘಡದಲ್ಲಿ ಎರಡು ಕಾರುಗಳು ಹಾಗೂ ಒಂದು ಆಟೋ ರಿಕ್ಷಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಮಧ್ಯರಾತ್ರಿ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಅಗ್ನಿಯ ಕೆನ್ನಾಲಿಗೆ ವಾಹನಗಳನ್ನು ಆವರಿಸಿಕೊಂಡಿದೆ. ಬೆಂಕಿಯ ತೀವ್ರತೆಯಿಂದಾಗಿ ಸ್ಥಳದಲ್ಲಿದ್ದ ಕಾರುಗಳು ಮತ್ತು ಆಟೋ ರಿಕ್ಷಾ ಸಂಪೂರ್ಣವಾಗಿ ನಾಶವಾಗಿವೆ. ಈ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಗಾಯಕ ಮ್ಯೂಸಿಕ್ ಮೈಲಾರಿ ಸೇರಿ ನಾಲ್ವರ ವಿರುದ್ಧ ಪೋಕ್ಸೋ ಕೇಸ್..!
ಬೆಂಕಿಗೆ ಆಹುತಿಯಾದ ವಾಹನಗಳು ಸುಫ್ರೀನ್ ಫರ್ನಾಂಡಿಸ್ ಹಾಗೂ ಥಾಮಸ್ ಫರ್ನಾಂಡಿಸ್ ಅವರಿಗೆ ಸೇರಿವೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ವಾಹನಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಮಾಲೀಕರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾಹಿತಿ ಪಡೆದ ತಕ್ಷಣ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಹುಬ್ಬಳ್ಳಿ: ಗಾದಿ ಮಳಿಗೆಗೆ ಬೆಂಕಿ ಅಪಾರ ಹಾನಿ
ಹುಬ್ಬಳ್ಳಿಯ ಬೆಂಗೇರಿಯಲ್ಲಿ ಗಾದಿ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಗಾದಿ ಬೆಂಕಿಗೆ ಆಹುತಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸುಮಾರು ವರ್ಷಗಳಿಂದ ಹತ್ತಿಯಿಂದ ಗಾದೆಯನ್ನು ತಯಾರು ಮಾಡುತ್ತಿದ್ದು, ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ರಾತ್ರಿ ವೇಳೆ ಶಾರ್ಟ್ ಸರ್ಕ್ಯೂಟ್ ಏಕಾಏಕಿಯಾಗಿ ಬೆಂಕಿ ಹತ್ತಿದ್ದು, ಇಡೀ ಅಂಗಡಿ ಬೆಂಕಿಯಿಂದ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಇದನ್ನೂ ಓದಿ: ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಆರೋಪ: ರಾಜ್ಯಾದ್ಯಂತ ಲ್ಯಾಬ್ ಪರೀಕ್ಷೆಗೆ ಸೂಚನೆ
ಸ್ಥಳೀಯರು ಬೆಂಕಿಯನ್ನು ನಂದಿಸುವುದಕ್ಕೆ ಹರಸಾಹಸ ಪಟ್ಟಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೆಂಕಿ ಅವಘಡದಿಂದ ಕೆಲ ಸಮಯ ಸುತ್ತಮುತ್ತಲಿನ ಜನರು ಆತಂಕ ಪಡುವಂತಾಗಿತ್ತು. ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.









