ಸಂಸತ್ತಿನಲ್ಲಿ ಸ್ಮರಣಾರ್ಥ ಕಾರ್ಯಕ್ರಮ, ಪಕ್ಷಾತೀತ ನಾಯಕರ ಉಪಸ್ಥಿತಿ
ನವದೆಹಲಿ: 2001ರ ಡಿಸೆಂಬರ್ 13ರಂದು ಭಾರತದ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭದ್ರತಾ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಸತ್ತಿನ ಆವರಣದಲ್ಲಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ, ಕೇಂದ್ರ ಸಚಿವರು, ಸಂಸದರು ಹಾಗೂ ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.
ಸಂಸತ್ ಭವನದಲ್ಲಿ ಆಯೋಜಿಸಲಾದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮರಣೆಗೆ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಭಯೋತ್ಪಾದಕರ ದಾಳಿಯನ್ನು ತಡೆಯುವಲ್ಲಿ ಅಪಾರ ಧೈರ್ಯ ಪ್ರದರ್ಶಿಸಿ ದೇಶದ ಪ್ರಜಾಪ್ರಭುತ್ವದ ಹೃದಯವಾದ ಸಂಸತ್ತನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿಯ ತ್ಯಾಗವನ್ನು ರಾಷ್ಟ್ರ ಸ್ಮರಿಸಿತು.
ಈ ದಿನದ ಮಹತ್ವವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣಲ್ಲಿ ಪೋಸ್ಟ್ ಮಾಡಿ ಸಂದೇಶ ಹಂಚಿಕೊಂಡಿದ್ದು, 2001ರಲ್ಲಿ ನಮ್ಮ ಸಂಸತ್ತಿನ ಮೇಲೆ ನಡೆದ ಘೋರ ದಾಳಿಯ ವೇಳೆ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರರನ್ನು ಇಂದು ದೇಶ ಸ್ಮರಿಸುತ್ತದೆ. ಅತ್ಯಂತ ಅಪಾಯಕರ ಸಂದರ್ಭದಲ್ಲೂ ಅವರ ಧೈರ್ಯ, ಜಾಗರೂಕತೆ ಮತ್ತು ಅಚಲ ಕರ್ತವ್ಯ ಪ್ರಜ್ಞೆ ಅನನ್ಯವಾಗಿತ್ತು. ಅವರ ಸರ್ವೋಚ್ಚ ತ್ಯಾಗಕ್ಕೆ ಭಾರತ ಎಂದೆಂದಿಗೂ ಕೃತಜ್ಞವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 2027ರ ದೇಶವ್ಯಾಪಿ ಡಿಜಿಟಲ್ ಜನಗಣತಿಗೆ ಕೇಂದ್ರ ಮಂಜೂರು
ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಹಲವು ನಾಯಕರು ಪಾಲ್ಗೊಂಡು ಗೌರವ ಸಲ್ಲಿಸಿದರು. ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿಗೆ ಆಗಮಿಸಿ ಹುತಾತ್ಮ ಭದ್ರತಾ ಸಿಬ್ಬಂದಿಗೆ ನಮನ ಸಲ್ಲಿಸಿದರು. ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ತ್ಯಾಗವನ್ನು ಸ್ಮರಿಸಿ, ಈ ದಾಳಿ ಭಾರತದ ಸಾರ್ವಭೌಮತ್ವದ ಮೇಲೆ ನಡೆದ ಕ್ರೂರ ಮತ್ತು ಪಿಶಾಚಿ ಕೃತ್ಯ ಎಂದು ಹೇಳಿದ್ದಾರೆ.
2001ರ ಸಂಸತ್ ದಾಳಿ ದೇಶದ ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆದ ಗಂಭೀರ ಆಘಾತವಾಗಿದ್ದು, ಭದ್ರತಾ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿತ್ತು. ಅವರ ಸಾಹಸ ಮತ್ತು ತ್ಯಾಗವು ದೇಶದ ಇತಿಹಾಸದಲ್ಲಿ ಸದಾಕಾಲ ಸ್ಮರಣೀಯವಾಗಿದ್ದು, ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾಗಿದೆ ಎಂದು ನಾಯಕರು ಅಭಿಪ್ರಾಯಪಟ್ಟರು.





















