ಬೆಳಗಾವಿ: `ಯಾರು ನನಗೆ ಬೆಂಬಲ ನೀಡಲಿ, ನೀಡದೇ ಇರಲಿ, ಇಲ್ಲಿರುವ ಒಬ್ಬರೇ ಒಬ್ಬರು ಶಾಸಕರು ಬೆಂಬಲ ನೀಡದೇ ಹೋದರೂ ಚಿಂತೆ ಇಲ್ಲ, ನನ್ನ ವಿರುದ್ಧ ಎಷ್ಟೇ ಪ್ರತಿಭಟನೆ ನಡೆದರೂ ನಾನು ಹೆದರುವುದಿಲ್ಲ, ನಾನು ಕೊನೆ ಉಸಿರಿರುವರೆಗೂ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವೆ’ ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದ ಕಾಗವಾಡ ಶಾಸಕ ರಾಜು ಕಾಗೆ ಇಂದು ಸದನದಲ್ಲಿಯೂ ಸಹ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದರು.
ಉತ್ತರ ಕರ್ನಾಟಕ ಚರ್ಚೆ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಯಾರೂ ಏನೇ ಅಂದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ನನ್ನ ವಿರುದ್ಧ ಎಷ್ಟೇ ಹೋರಾಟ ನಡೆದರೂ ನಾನು ಹೆದರುವುದಿಲ್ಲ, ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ, ಅನುದಾನ ಕೊಡಿ ಎಂದು ಭಿಕ್ಷೆ ಬೇಡಿದಂತೆ ಬೇಡಿದಾಗ ಒಂದಿಷ್ಟು ಅನುದಾನವನ್ನು ನಮ್ಮ ಉಡಿಗೆ ಹಾಕುತ್ತಾರೆ, ಪರಿಸ್ಥಿತಿ ಹೀಗಿರುವಾಗ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು. ನಾನು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ, ಆದರೆ ಮಾತನಾಡದೇ ಹೋದರೆ ನನ್ನ ಕ್ಷೇತ್ರಕ್ಕೆ ನ್ಯಾಯ ಸಿಗುತ್ತಿಲ್ಲವಲ್ಲ ಎಂದರು.






















