ಗುವಾಹಟಿ: ಕಂದಕಕ್ಕೆ ಟ್ರಕ್ ಉರುಳಿಬಿದ್ದು 18 ಜನರು ಮೃತಪಟ್ಟಿರುವ ಘಟನೆ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮೆಟೆಂಗ್ಲಿಯಾಂಗ್ ಬಳಿ ನಡೆದಿದೆ.
ಡಿಸೆಂಬರ್ 8 ರ ರಾತ್ರಿ 1,000 ಅಡಿ ಪ್ರಪಾತಕ್ಕೆ ಟ್ರಕ್ ಉರುಳಿ ಬಿದ್ದಿದೆ. ಆದರೆ, ಈ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲ. ಅಪಘಾತದಲ್ಲಿ ಬದುಕುಳಿದ ವ್ಯಕ್ತಿಯೋರ್ವ ಡಿಸೆಂಬರ್ 10ರಂದು ಜಿಆರ್‌ಇಎಫ್ ಶಿಬಿರ ತಲುಪಿ ಘಟನೆ ಬಗ್ಗೆ ವಿವರಿಸಿದ್ದಾನೆ. ನಂತರ ಅರುಣಾಚಲ ಪ್ರದೇಶ ಪೊಲೀಸರು ಮತ್ತು ಪಿಆರ್‌ಒ ರಕ್ಷಣಾ ಇಲಾಖೆಗೆ ಮಾಹಿತಿ ಲಭ್ಯವಾಗಿದೆ.
ಒಟ್ಟು 22 ಜನರ ಕಾರ್ಮಿಕರ ಗುಂಪು ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಿಂದ ಅಂಜಾವ್ ಜಿಲ್ಲೆಯ ಚಗ್ಲಗಾಮ್‌ನ ನಿರ್ಮಾಣ ಸ್ಥಳಕ್ಕೆ ತೆರಳಿತ್ತು. ಆದರೆ ಸ್ಥಳಕ್ಕೆ ಕಾರ್ಮಿಕರು ಬರದೇ ಇದ್ದಾಗ ಸಹ ಕಾರ್ಮಿಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಟ್ರಕ್ ಕಿರಿದಾದ ಪರ್ವತ ರಸ್ತೆಯಿಂದ ಹೊರಟು, ಚಾಗ್ಲಗಂನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಕೆಎಂ 40ರ ಬಳಿ ಪ್ರಪಾತಕ್ಕೆ ಉರುಳಿದೆ. ಈ ಪ್ರದೇಶದಲ್ಲಿ ಮೊಬೈಲ್ ಸಂಪರ್ಕವಿಲ್ಲದ ಕಾರಣ ಎರಡು ದಿನಗಳ ಕಾಲ ಗೊತ್ತೇ ಆಗಿಲ್ಲ.
ದುರ್ಗಮ ಪ್ರದೇಶದಲ್ಲಿ ಅಪಘಾತ ನಡೆದಿದ್ದು, ಸಂತ್ರಸ್ತನಿಂದ ಮಾಹಿತಿ ತಿಳಿದ ಕೂಡಲೇ ಭಾರತೀಯ ಸೇನೆಯು ಪ್ರಮುಖ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ರಸ್ತೆಯಿಂದ ಸುಮಾರು 200 ಮೀಟರ್ ಕೆಳಗೆ ಟ್ರಕ್ ಬಿದ್ದಿರುವುದು ಪತ್ತೆಯಾಗಿದೆ. ಹಗ್ಗದ ನೆರವಿನಿಂದ 18 ಶವಗಳನ್ನು ಮೇಲಕ್ಕೆತ್ತಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.





















