ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯ ಗವಿಸಿದ್ಧೇಶ್ವರ ಮಹಾ ಮಹೋತ್ಸವಕ್ಕೆ ಮೇಘಾಲಯ ರಾಜ್ಯಪಾಲರಾದ ವಿಜಯಶಂಕರ ಚಾಲನೆ ನೀಡಲಿದ್ದಾರೆ. ಯಾರು ಚಾಲನೆ ನೀಡಬಹುದು ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಂತಾಗಿದೆ.
ಪ್ರತಿ ವರ್ಷವೂ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವಕ್ಕೆ ವಿಶಿಷ್ಟ ಸಾಧಕರಿಂದಲೇ ಚಾಲನೆ ದೊರೆಯುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು, ಕ್ರೀಡಾಪಟುಗಳು, ಸಂಗೀತ ಕಲಾವಿದರು, ಸ್ವಾಮೀಜಿಗಳು, ಅಧ್ಯಾತ್ಮ ಚಿಂತಕರು, ಪರಿಸರ ಪ್ರೇಮಿಗಳು, ಉದ್ಯಮಿಗಳು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವ ಮೂಲಕ ರಥೋತ್ಸವದ ಘನತೆ ಹೆಚ್ಚಾಗಿರುವುದು ವಿಶೇಷ.
ಈ ಹಿನ್ನೆಲೆ ಸಹಜವಾಗಿಯೇ ಈ ವರ್ಷ ರಥೋತ್ಸವಕ್ಕೆ ಚಾಲನೆ ನೀಡುವವರು ಯಾರು ಎಂಬ ಕುತೂಹಲ ಕೆರಳಿಸಿತ್ತು. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಅಂದರೆ ಫೆಬ್ರುವರಿಯಲ್ಲಿ ಕೊಪ್ಪಳದ ಗವಿಮಠಕ್ಕೆ ದಂಪತಿ ಸಮೇತರಾಗಿ ಆಗಮಿಸಿದ್ದ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯಿಂದ ಆಶೀರ್ವಾದ ಪಡೆದಿದ್ದರು.
2026ರ ಜನವರಿ 5ರಂದು ನಡೆಯುತ್ತಿರುವ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವಕ್ಕೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಮೂಲದವರೇ ಆದ, ಮೇಘಾಲಯದ `ಜನಪಾಲ’ ಎಂದೇ ಖ್ಯಾತರಾದ ರಾಜ್ಯಪಾಲರಾದ ವಿಜಯಶಂಕರ್ ಚಾಲನೆ ನೀಡಲು ಆಗಮಿಸುತ್ತಿದ್ದಾರೆ.
2018ರಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, 2023ರಲ್ಲಿ ಈಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್, 2025ಕ್ಕೆ ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಎಂ. ವೆಂಕಟೇಶಕುಮಾರ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ವಿವಿಧ ಸಾಧಕರು ಗವಿಸಿದ್ಧೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಈ ಸಾಲಿಗೆ ಮೇಘಾಲಯ ರಾಜ್ಯಪಾಲರಾದ ವಿಜಯಶಂಕರ್ ಕೂಡಾ ಸೇರುತ್ತಿರುವುದು ಗಮನಾರ್ಹ. ಅಲ್ಲದೇ ಚಾಲನೆ ನೀಡಿದ ಬಹುತೇಕರು ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಎನ್ನುವುದು ವಿಶೇಷ.
ಊಹಾಪೋಹಕ್ಕೆ ತೆರೆ: 2024ರಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವಕ್ಕೆ ಇನ್ಫೋಸಿಸ್, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ಕಳೆದ ವರ್ಷ ಹಿರಿಯ ನಟ ಅಮಿತಾಬ್ ಬಚ್ಚನ್ ಆಗಮಿಸುತ್ತಾರೆ ಎನ್ನುವ ಊಹಾಪೋಹಗಳಿದ್ದವು. ಅದರಂತೆಯೇ ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಾರೆ ಎನ್ನುವ ಮಾಹಿತಿ ಹರಿದಾಡುತ್ತಿದ್ದವು. ಹಾಗಾಗಿ ಎಚ್ಚೆತ್ತ ಗವಿಮಠ ಅಧಿಕೃತವಾಗಿ ಮೇಘಾಲಯ ರಾಜ್ಯಪಾಲರಾದ ವಿಜಯಶಂಕರ್ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ಹೊರಡಿಸಿದೆ.
ವಿಜಯಶಂಕರ ಯಾರು?: ಸಿ.ಎಚ್. ವಿಜಯಶಂಕರ್ ಹಾವೇರಿ ಜಿಲ್ಲೆಯ ಮಾಕನೂರಿನಲ್ಲಿ ಜನಿಸಿದ್ದು, ಮೈಸೂರಿನ ಸಂಸದರಾಗಿ, ಶಾಸಕರಾಗಿ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅರಣ್ಯ ಮತ್ತು ಪರಿಸರ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಹುತೇಕ ಬಿಜೆಪಿಯಲ್ಲಿಯೇ ರಾಜಕೀಯ ಜೀವನ ಕಳೆದಿದ್ದ ಅವರು, ಕಾಂಗ್ರೆಸ್ಸಿಗೆ ಹಾಗೇ ಹೋಗಿ, ಹೀಗೆ ಮತ್ತೆ ಬಿಜೆಪಿಗೆ ಬಂದಿದ್ದರು. 2024 ಜುಲೈ 30ರಿಂದ ಮೇಘಾಲಯ ರಾಜ್ಯಭವನವನ್ನು ಜನಸಾಮಾನ್ಯರಿಗಾಗಿಯೇ ತೆರೆದಿಡುವ ಮೂಲಕ `ಜನಪಾಲ’ ಎಂದೇ ಹೆಸರು ಮಾಡಿದ್ದಾರೆ.






















