ಹುಬ್ಬಳ್ಳಿ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ – 2020 ಕ್ಕೆ ತಿದ್ದುಪಡಿ ತಂದು ಗೋ ಕಳ್ಳರಿಗೆ ಸಹಕಾರ ನೀಡುತ್ತಿರುವ ಕಾಂಗ್ರೆಸ್ ಸರಕಾರದ ನಿರ್ಧಾರ ಖಂಡನೀಯ. ಸಿದ್ದರಾಮಯ್ಯ ಅವರು ಮುಸ್ಲಿಮರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಗೋ ಕಳ್ಳರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಗೋ ಸಾಗಣೆ ಮಾಡುತ್ತಿರುವ ವಾಹನದ ಬೆಲೆಯ ಮೊತ್ತದ ಬಾಂಡ್‌ನ್ನು ಗೋಕಳ್ಳರು ಮಾಡಬೇಕು. ಅದನ್ನು ಸಡಿಲಗೊಳಿಸಿ, ಗೋ ಹತ್ಯೆಗೆ ಬೆಂಬಲ ನೀಡುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರ ಒತ್ತಡ, ಮುಸ್ಲಿಂ ಸಚಿವರು, ಶಾಸಕರು, ಅಧಿಕಾರಿಗಳ ಒತ್ತಡಕ್ಕೆ ಕಾಂಗ್ರೆಸ್ ಸರಕಾರ ಮಣಿದು ಅವರ ಮಾತು ಕೇಳುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಇದೊಂದು ರೈತ ವಿರೋಧಿ, ಜನವಿರೋಧಿ ಸರಕಾರವಾಗಿದೆ. ನಿರ್ಲಜ್ಯ ಸರಕಾರವಾಗಿದೆ. ಅಧಿವೇಶನದಲ್ಲಿ ಈ ಕಾಯ್ದೆ ಹಾಗೂ ದ್ವೇಷ ಭಾಷಣ ಅಪರಾಧ ಕಾಯ್ದೆ ವಿರೋಧಿಸಿ ಹಿಂದೂ ಸಂಘಟನೆಗಳು ಒಂದು ದಿನ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.























