ಸ್ವಾತಂತ್ರ್ಯ ಹೋರಾಟದ ಕನಸು ಸಾಧಿಸಲು ವಂದೇ ಮಾತರಂ ಪ್ರೇರಕ ಶಕ್ತಿ

0
122

ನವದೆಹಲಿ: ಲೋಕಸಭೆಯಲ್ಲಿ ಸೋಮವಾರ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಕುರಿತು ನಡೆದ ವಿಶೇಷ ಚರ್ಚೆಯನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದರು. ತಮ್ಮ ಒಂದು ಗಂಟೆಯ ಭಾಷಣದಲ್ಲಿ ಅವರು, “ವಂದೇ ಮಾತರಂ ಬ್ರಿಟಿಷರ ದಬ್ಬಾಳಿಕೆಗೆ ನೀಡಿದ ಅತ್ಯಂತ ಶಕ್ತಿಶಾಲಿ ಉತ್ತರ. ಸ್ವಾತಂತ್ರ್ಯ ಹೋರಾಟಗಾರರಿಗೆ ಇದು ಸ್ಫೂರ್ತಿ, ಧೈರ್ಯ ಮತ್ತು ಶಕ್ತಿಯ ಮೂಲವಾಗಿತ್ತು. ಮಹಾತ್ಮ ಗಾಂಧಿಯವರೂ ಅದನ್ನು ರಾಷ್ಟ್ರಗೀತೆಯ ಸ್ಥಾನಕ್ಕೆ ಯೋಗ್ಯವೆಂದು ಕಂಡಿದ್ದರು” ಎಂದು ಹೇಳಿದರು.

“ವಂದೇ ಮಾತರಂ ನಮ್ಮ ಮನಸ್ಸಿಗೆ, ಹೋರಾಟಕ್ಕೆ ಮತ್ತು ರಾಷ್ಟ್ರಭಾವನೆಗೆ ಅಪಾರ ಬಲ ನೀಡಿದೆ. ಆದರೆ ಕಳೆದ ದಶಕಗಳಲ್ಲಿ ಈ ಗೀತೆಗೆ ಅನ್ಯಾಯ ನಡೆಯಿತು. ವಂದೇ ಮಾತರಂಗೆ ಏಕೆ ವಿರೋಧ ಹುಟ್ಟಿತು? ಈ ಗೀತೆ ವಿರುದ್ಧ ದ್ವೇಷದ ಬಿತ್ತನೆ ಹೇಗೆ ನಡೆಯಿತು?” ಎಂದು ಪ್ರಶ್ನಿಸಿದರು.

1936ರ ಅಕ್ಟೋಬರ್ 15ರಂದು ಲಕ್ನೋನಲ್ಲಿ ಮೊಹಮ್ಮದ್ ಅಲಿ ಜಿನ್ನಾ ವಂದೇ ಮಾತರಂ ವಿರುದ್ಧ ಘೋಷಣೆ ನೀಡಿದ್ದ ಸಂದರ್ಭದಲ್ಲಿ, ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು ಅವರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಪ್ರಧಾನಿ ಹೇಳಿದರು. “ಮುಸ್ಲಿಂ ಲೀಗ್‌ನ ಆರೋಪಗಳಿಗೆ ತಕ್ಷಣ ಪ್ರತಿರೋಧಿಸುವ ಬದಲು, ನೆಹರು ವಂದೇ ಮಾತರಂ ಕುರಿತು ತನಿಖೆ ನಡೆಸಲು ಮುಂದಾದರು. ಇದರಿಂದ ಗೀತೆಯ ಗೌರವಕ್ಕೆ ತೀವ್ರ ಹಾನಿಯಾಯಿತು” ಎಂದು ಅವರು ಆರೋಪಿಸಿದರು.

ವಂದೇ ಮಾತರಂನ 150 ವರ್ಷಗಳ ಪಯಣವು ಹಲವು ಅಡೆತಡೆಗಳನ್ನು ಎದುರಿಸಿದೆ, ವಂದೇ ಮಾತರಂ ತನ್ನ 50 ನೇ ವಾರ್ಷಿಕೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ದೇಶವು ಗುಲಾಮಗಿರಿಯಲ್ಲಿ ಬದುಕಬೇಕಾದ ಅನಿವಾರ್ಯತೆ ಇತ್ತು. ವಂದೇ ಮಾತರಂ ತನ್ನ 100 ನೇ ವಾರ್ಷಿಕೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ದೇಶವು ತುರ್ತು ಪರಿಸ್ಥಿತಿಯ ಸಂಕೋಲೆಗಳಿಂದ ಬಂಧಿಸಲ್ಪಟ್ಟಿತು, ಭಾರತದ ಸಂವಿಧಾನದ ಕತ್ತು ಹಿಸುಕಲಾಗಿತ್ತು. ದೇಶಭಕ್ತರನ್ನು ಕಂಬಿಗಳ ಹಿಂದೆ ಹಾಕಲಾಗಿತ್ತು ಎಂದಿದ್ದಾರೆ.

ವಂದೇ ಮಾತರಂ 150 ವರ್ಷಗಳನ್ನು ಪೂರೈಸುತ್ತಿರುವುದು ಮತ್ತು ನಾವೆಲ್ಲರೂ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಈ ಮಹಾನ್ ಗೀತೆಯ ವೈಭವವನ್ನು ಪುನಃ ಸ್ಥಾಪಿಸಲು ಒಂದು ಅವಕಾಶ. ದೇಶ ಮತ್ತು ಸದನ ಎರಡೂ ಈ ಅವಕಾಶವನ್ನು ಕಳೆದುಕೊಳ್ಳಬಾರದು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಈ ವಂದೇ ಮಾತರಂ ಎಂದಿದ್ದಾರೆ.

ಈ ಪ್ರೇರಣೆಯೊಂದಿಗೆ ನಾವು ನಮ್ಮ ಕಾರ್ಯ ಮುಂದುವರಿಸಬೇಕು. ಈ ಮೂಲಕ ಸೋಲಿಲ್ಲದ ಮತ್ತು ನಿರಂತರವಾಗಿ ಉದಯಿಸುತ್ತಿರುವ ಭಾರತದ ಕನಸನ್ನು ನನಸಾಗಿಸಲು ನಾವು ಅವಿಶ್ರಾಂತವಾಗಿ ಶ್ರಮಿಸಬೇಕು ಮತ್ತು ವಂದೇ ಮಾತರಂ ಈ ಹಾದಿಯಲ್ಲಿ ನಮ್ಮನ್ನು ಮುನ್ನಡೆಸುವ ಸ್ಫೂರ್ತಿಯಾಗಿದೆ. ಶತಮಾನಗಳಿಂದ ನಾಗರಿಕರಿಗೆ ಸ್ಫೂರ್ತಿ ನೀಡಿದ ಮತ್ತು ಅವರ ಪ್ರಾಣವನ್ನು ತ್ಯಾಗ ಮಾಡಲು ಪ್ರೇರೇಪಿಸಿದ ಹಾಡು ವಿಶ್ವದ ಇತಿಹಾಸದಲ್ಲಿ ಬೇರೆಲ್ಲಿಯೂ ಇಲ್ಲ, ಈ ಬಗ್ಗೆ ನಾವು ಹೆಮ್ಮೆಪಡಬೇಕು.

ವಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಆತ್ಮ ಎಂದು ಪ್ರಧಾನಿ ಪುನರುಚ್ಚರಿಸಿ, “ಇದು ಕೇವಲ ಗೀತೆ ಅಲ್ಲ, ದೇಶಭಕ್ತಿಯ ಜಾಗೃತಿ, ರಾಷ್ಟ್ರೀಯ ಗೌರವದ ಘೋಷಣೆ” ಎಂದರು.

Previous articleಭೈರಪ್ಪನವರನ್ನು ಮನಬಿಚ್ಚಿ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ
Next articleಲಭಿಸದ ಆಂಬ್ಯುಲೆನ್ಸ್ 108: ಗೂಡ್ಸ್ ಟೆಂಪೋದಲ್ಲಿ ರೋಗಿ ಆಸ್ಪತ್ರೆಗೆ!

LEAVE A REPLY

Please enter your comment!
Please enter your name here