ಬೆಳಗಾವಿ: ʼಎಸ್.ಎಲ್. ಭೈರಪ್ಪನವರು ಭಾರತದ ಅತ್ಯಂತ ಶ್ರೇಷ್ಠ ಕಾದಂಬರಿಕಾರ. ಭೈರಪ್ಪನವರ ಕಾದಂಬರಿಗಳ ವಸ್ತು ಅಥವಾ ಅವರ ನಿಲುವುಗಳ ವಿಷಯದಲ್ಲಿ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವರು ದೇಶದ ಶ್ರೇಷ್ಠ ಕಾದಂಬರಿಕಾರ ಎಂಬುದರಲ್ಲಿ ಮಾತ್ರ ಯಾವುದೇ ಭಿನ್ನಮತವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನುಡಿದರು.
ಅಗಲಿದ ಕಾದಂಬರಿಕಾರನಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಸೈದ್ಧಾಂತಿಕವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಅತ್ಯಂತ ಶ್ರೇಷ್ಠ ಸಾಹಿತಿ ಎಂಬ ಗೌರವ ಭೈರಪ್ಪನವರಿಗೆ ಸದಾ ಕಾಲಕ್ಕೂ ಸಲ್ಲುತ್ತದೆ ಎಂದರು. `ಮೈಸೂರಿನಲ್ಲಿ ಭೈರಪ್ಪನವರ ಸ್ಮರಣೆಗೆ ಸರ್ಕಾರ ಸ್ಮಾರಕವನ್ನು ರೂಪಿಸಲಿದೆ’ ಎಂದು ಪುನರುಚ್ಚರಿಸಿದರು. ಭೈರಪ್ಪನವರ ಕೆಲವು ಪ್ರಮುಖ ಕಾದಂಬರಿಗಳನ್ನು ತಾವು ಓದಿರುವುದಾಗಿ ಸಿಎಂ ಹೇಳಿದರು.
ಪರ್ವ’ ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಸೇರಿದಂತೆ ಹಲವು ಕಾದಂಬರಿಗಳು ಮರಾಠಿ ಓದುಗರ ಮೆಚ್ಚುಗೆಗೂ ಪಾತ್ರವಾಗಿದ್ದವು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಭೈರಪ್ಪನವರು ತಮ್ಮದೇ ಆದ ದೊಡ್ಡ ಓದುಗ ಬಳಗವನ್ನ ಸೃಷ್ಟಿಸಿಕೊಂಡಿದ್ದರು. ಅನನ್ಯ ಸಾಹಿತಿ, ಅತ್ಯಂತ ಸರಳ ವ್ಯಕ್ತಿತ್ವದ ಭೈರಪ್ಪ ಅವರ ನಿಧನದಿಂದ ಸಾಹಿತ್ಯ ಪ್ರೇಮಿಗಳಿಗೆ ದೊಡ್ಡ ನಷ್ಟವುಂಟಾಗಿದೆ ಎಂದರು.
ಸಾಲು ಮರದ ತಿಮ್ಮಕ್ಕ ವಸ್ತು ಸಂಗ್ರಹಾಲಯ: ಇತ್ತೀಚೆಗೆ ನಿಧನರಾದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸಾಲು ಮರದ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ವರ್ಷದ ಒಳಗೆ ಆರಂಭಿಸಲಾಗುವುದು ಎಂದರು.





















