ಪಣಜಿ: ಉತ್ತರ ಗೋವಾದ ಅರ್ಪೋರಾದ ಪ್ರಸಿದ್ಧ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 25 ಮಂದಿ ಸಜೀವ ದಹನಗೊಂಡ ಈ ದುರಂತದ ಹಿನ್ನೆಲೆಯಲ್ಲಿ, ಅಗತ್ಯ ಸುರಕ್ಷತಾ ಪ್ರಮಾಣಪತ್ರಗಳಿಲ್ಲದೆ ಕ್ಲಬ್‌ಗೆ ಅನುಮತಿ ನೀಡಿದ ಮೂವರು ಉನ್ನತ ಅಧಿಕಾರಿಗಳನ್ನು ಗೋವಾ ಸರ್ಕಾರ ಈಗ ಅಮಾನತುಗೊಳಿಸಿದೆ.
ಅಮಾನತುಗೊಂಡ ಅಧಿಕಾರಿಗಳು: ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಡಾ.ಶಮಿಲಾ ಮಾಂಟೆರೋ, ಪಂಚಾಯತಿಗಳ ನಿರ್ದೇಶಕಿ ಸಿದ್ಧಿ ಹಲರ್ನ್ಕರ್ ಮತ್ತು ಹಡ್‌ಫಡೆ-ನಾಗ್ವಾ ಪಂಚಾಯತ್ ಕಾರ್ಯದರ್ಶಿ ರಘುವೀರ್ ಬಗ್ಕರ್ ಮೂವರನ್ನು ಅಮಾನತುಗೊಳಿಸಿದೆ. ಆರೋಪ ಪ್ರಕಾರ, ಅಗ್ನಿ ಸುರಕ್ಷತಾ ವ್ಯವಸ್ಥೆ, ಲೈಸನ್ಸ್ ಹಾಗೂ ಸುರಕ್ಷತಾ ಪರಿಶೀಲನೆ ಪೂರ್ಣಗೊಳ್ಳದಿದ್ದರೂ, 2023ರಲ್ಲಿ ನೈಟ್‌ಕ್ಲಬ್‌ಗೆ ಅಧಿಕೃತ ಅನುಮತಿ ನೀಡಲಾಗಿತ್ತು.
ಬಂಧಿತರಾದ ಸಿಬ್ಬಂದಿ: ಘಟನೆಯ ನಂತರ ಕ್ಲಬ್‌ನ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು ಮುಖ್ಯ ಜನರಲ್ ಮ್ಯಾನೇಜರ್ ರಾಜೀವ್ ಮೋಡಕ್. ಮ್ಯಾನೇಜರ್ ವಿವೇಕ್ ಸಿಂಗ್ ಹಾಗೂ ಸಿಬ್ಬಂದಿ ರಾಜೀವ್ ಸಿಂಘಾನಿಯಾ, ಪ್ರಿಯಾಂಶು ಠಾಕೂರ್ ಬಂದಿಸಲಾಗಿದ್ದು. ಇನ್ನೂ ಕ್ಲಬ್‌ನ ಮಾಲೀಕರಾದ ಗೌರವ್ ಮತ್ತು ಸೌರಭ್ ಲುತ್ರಾ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದ್ದು, ಇವರಿಗಾಗಿ ದೆಹಲಿಯಲ್ಲಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಸ್ಥಳೀಯ ಸರಪಂಚ್ ರೋಷನ್ ರೆಡ್ಕರ್ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಕ್ಲಬ್‌ಗೆ ಅನಧಿಕೃತ ಅನುಮತಿ, ಸ್ಥಳೀಯ ಮಟ್ಟದ ಲೆಕ್ಕಾಚಾರ ಗೊಂದಲ ಹಾಗೂ ಸುರಕ್ಷತಾ ನಿರ್ಲಕ್ಷ್ಯ ಕುರಿತು ವಿಚಾರಣೆ ನಡೆಯುತ್ತಿದೆ.
ಏನಿದು ದುರಂತ?: ಉತ್ತರ ಗೋವಾದ ಅರ್ಪೋರಾದ ರೋಮಿಯೋ ಲೇನ್ ಪ್ರದೇಶದಲ್ಲಿರುವ ಪ್ರಸಿದ್ಧ ನೈಟ್‌ಕ್ಲಬ್ ತಡರಾತ್ರಿ ಮುಚ್ಚುವ ಸಿದ್ಧತೆಯಲ್ಲಿ ಇದ್ದಾಗ, ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಅದರಿಂದ ಉಂಟಾದ ಬೆಂಕಿ ಕ್ಷಣಾರ್ಧದಲ್ಲಿ ಕ್ಲಬ್‌ಗೆವ್ಯಾಪಿಸಿ, ಭೀಕರ ದಹನಕ್ಕೆ ಕಾರಣವಾಯಿತು. ದುರಂತದ ಪರಿಣಾಮವಾಗಿ 25 ಮಂದಿ ಸಜೀವ ದಹನವಾಗಿದ್ದು ಸುಮಾರು 50 ಮಂದಿ ಗಾಯಗಳಾಗಿದ್ದರು. ಗಾಯಾಳುಗಳನ್ನು ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಖ್ಯಮಂತ್ರಿ ಸಾವಂತ್ ಅವರು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಧಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.




















