ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರ ಕರ್ನಾಟಕದ ಕೃಷಿ ಸಮಸ್ಯೆಗಳ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ನೀಡಬೇಕು ಎಂದು ಸೋಮವಾರ ಬೆಂಗಳೂರಿನಲ್ಲಿ ವರದಿಗಾರರೂಂದಿಗೆ ಮಾತನಾಡಿದ್ದಾರೆ.
ಕಬ್ಬು ಮತ್ತು ಮೆಕ್ಕೆಜೋಳ ಸಮಸ್ಯೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ದುಬಾರಿಯಾದರೂ ರೈತರ ಪರವಾದ ತೀರ್ಮಾನ ಕೈಗೊಂಡಿರುವುದಾಗಿ ಡಿಕೆಶಿ ತಿಳಿಸಿದರು. ಆದರೆ ಇಂತಹ ಪ್ರಮುಖ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೂ ಬಾಯಿ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸಮಸ್ಯೆಗಳ ಕುರಿತು ಬಿಜೆಪಿಯ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. “ರಾಜ್ಯ ಸರ್ಕಾರವೇ ಖರೀದಿ ಮಾಡಬೇಕು ಎಂದು ಬೊಮ್ಮಾಯಿ ಹೇಳುತ್ತಿದ್ದಾರೆ.
ಹಾಗಿದ್ದರೆ ಕೇಂದ್ರ ಸರ್ಕಾರದ ಪಾಲೇನು? ಇದರ ತೀರ್ಮಾನ ಮಾಡುವವರು ಯಾರು?” ಎಂದು ಡಿಕೆಶಿ ಪ್ರಶ್ನಿಸಿದರು. ಪ್ರತಿಯೊಂದು ಬೆಳೆಗೂ ಬೆಲೆ ನಿಗದಿ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಆದರೂ, ರೈತರ ಸಂಕಷ್ಟದ ಸಮಯದಲ್ಲಿ ಕೇಂದ್ರವು ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಪರಿಹಾರ ನೀಡುವಲ್ಲಿ ಕೇಂದ್ರದ ಜವಾಬ್ದಾರಿಯಿದೆ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. ಹಾಗೇ ಬೊಮ್ಮಾಯಿ ಯಾಕೆ ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿಲ್ಲ ಅಥವಾ ಪ್ರಧಾನಿ ಮತ್ತು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಇದೇ ವೇಳೆ, ನೀರಾವರಿ ಯೋಜನೆಗಳ ಅನುಷ್ಠಾನವಾಗದಿರುವ ಬಗ್ಗೆ ವಿರೋಧ ಪಕ್ಷದ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ನನ್ನ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಮಾಡಿದಷ್ಟು ಕೆಲಸವನ್ನು ಇಲಾಖೆಯ ಇತಿಹಾಸದಲ್ಲಿ ಯಾರೂ ಮಾಡಿಲ್ಲ ಎಂದಿದ್ದಾರೆ.
ಹಾಗೇ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಲಿ, ಅಲ್ಲಿ ಉತ್ತರಿಸುತ್ತೇನೆ” ಎಂದು ಸವಾಲು ಹಾಕಿದ್ದಾರೆ. ಇತ್ತೀಚೆಗೆ ನವಜೋತ್ ಸಿಂಗ್ ಸಿಧು ಪತ್ನಿ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಕೇಳಿದಾಗ, “ಈ ರೀತಿ ಹೇಳಿದವರನ್ನು ಹುಚ್ಚಾಸ್ಪತ್ರೆಗೆ ಸೇರಿಸೋಣ” ಎಂದು ಪ್ರತಿಕ್ರಿಯಿಸುವ ಮೂಲಕ ಡಿಕೆಶಿ ಆ ಹೇಳಿಕೆಯನ್ನು ಸಹ ತಳ್ಳಿಹಾಕಿದರು.























