ಹುಬ್ಬಳ್ಳಿ: ಸೋಮವಾರದಿಂದ ಒಟ್ಟು 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಈಗಾಗಲೇ ಕುಂದಾನಗರಿ ಬೆಳಗಾವಿ ಸಜ್ಜುಗೊಂಡಿದೆ.
157ನೇ ಅಧಿವೇಶನದ ಪೈಕಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ 14ನೇ ಚಳಿಗಾಲ ಅಧಿವೇಶನ ಇದಾಗಿದೆ. ಇನ್ನೂ ಉತ್ತರ ಕರ್ನಾಟಕದಲ್ಲಿ ನಡೆಯುವ ಈ ಅಧಿವೇಶನದಿಂದ ಉತ್ತರ ಕರ್ನಾಟಕಕ್ಕೆ ದೊಡ್ಡ ಮಟ್ಟದಲ್ಲಿ ಏನೂ ಪ್ರಯೋಜನ ಆಗುತ್ತಿಲ್ಲ ಎನ್ನುವುದು ಈ ಭಾಗದ ಜನರ ಮತ್ತು ಕೆಲ ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ.
ವಿಭಜನೆ ಕೂಗು: ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಮತ್ತೆ ಜಿಲ್ಲಾ ವಿಭಜನೆ ಕೂಗು ಹೆಚ್ಚಿದೆ. ಗೋಕಾಕ, ಚಿಕ್ಕೋಡಿ, ಬೈಲಹೊಂಗಲದಲ್ಲಿ ಜಿಲ್ಲಾ ಬೇಡಿಕೆ ಬಂದ್, ಪ್ರತಿಭಟನೆ ಆರಂಭವಾಗಿವೆ. ಈ ಬಾರಿ ಜಿಲ್ಲೆ ವಿಭಜನೆಗೆ ಹೆಚ್ಚು ಒತ್ತಡ ಕೇಳಿ ಬರುತ್ತಿದೆ. ಜನಪ್ರತಿನಿಧಿಗಳು ಕೂಡ ಚಳಿಗಾಲ ಅಧಿವೇಶನದಲ್ಲೇ ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಸರ್ಕಾರ ನಿರ್ಧಾರ ಪ್ರಕಟಿಸಬೇಕೆಂದು ಒತ್ತಡ ತರುತ್ತಿದ್ದಾರೆ.
ಅಥಣಿ ಜಿಲ್ಲೆ ಬೇಡಿಕೆ: ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಜಿಲ್ಲೆ ರಚನೆಗೆ ದಶಕಗಳಿಂದಲೇ ಜನ ಹೋರಾಟ ಮಾಡುತ್ತಿದ್ದಾರೆ. ಇದೀಗ ಅಥಣಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಮತ್ತೊಂದು ಬೇಡಿಕೆ ಮುನ್ನೆಲೆಗೆ ಬರುತ್ತಿದೆ. ಕೆಲವು ಶಾಸಕರು ಬೆಳಗಾವಿ ವಿಭಜನೆ ಕೂಗಿಗೆ ಧ್ವನಿಗೂಡಿಸಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಜಿಲ್ಲೆ ಬಗ್ಗೆ ಸರಕಾರದ ಗಮನಕ್ಕೆ ತರುವ ಕಾರ್ಯ ಮಾಡಬೇಕೆಂಬುದು ಹೋರಾಟಗಾರರ ಒತ್ತಾಯವಾಗಿದೆ.
ಬಿಜೆಪಿ ಪ್ರತಿಭಟನೆ: ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿ. 9ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ .ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬೆಳಗಾವಿ ಗ್ರಾಮೀಣ ಮಂಡಲ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದ್ದಾರೆ.
ಬೃಹತ್ ಪ್ರತಿಭಟನಾ ಮೆರವಣಿಗೆಯು ಬೆಳಗಾವಿ ನಗರದ ಹೊರವಲಯದ ಮಾಲಿನಿ ಸಿಟಿಯಿಂದ ಪ್ರಾರಂಭವಾಗಿ ಪ್ರತಿಭಟನಾ ಪಾದಯಾತ್ರೆ ಮೂಲಕ ತೆರಳಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ತಿಳಿಸಿದೆ.
ಒಡಕು ಬೇಡ: ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದಿಂದ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಎಲ್ಲರಿಗೂ ತಿಳಿಸಲಾಗಿದೆ. ಇದರಲ್ಲಿ ಯಾವುದೇ ಒಡಕು ಇರಲೇಬಾರದು. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ, ಎರಡೂವರೆ ವರ್ಷಗಳಲ್ಲಿ ಸರ್ಕಾರ ಕೈಗೊಂಡ ಕಾರ್ಯಗಳ ಬಗ್ಗೆ ಗಟ್ಟಿಯಾಗಿ ತಿಳಿಸಬೇಕು. ಅದರಲ್ಲೂ ಗ್ಯಾರಂಟಿ ಯೋಜನೆಗಳಿಗೆ ಲಕ್ಷ ಕೋಟಿ ರೂ. ವರೆಗೆ ವ್ಯಯಿಸಲಾಗಿದೆ. ಅದರಿಂದಾಗಿ ರಾಜ್ಯದ ಜನ ಆರ್ಥಿಕವಾಗಿ ಬದಲಾವಣೆ ಹೊಂದಿದ್ದಾರೆ, ಅಲ್ಲದೇ ರಾಜ್ಯದ ಆರ್ಥಿಕ ಅಭಿವೃದ್ಧಿ ಕುರಿತಂತೆ ಸಚಿವರು, ಶಾಸಕರು ತಿಳಿಸಬೇಕು ಎಂದು ನಿರ್ಧರಿಸಲಾಗಿದೆ.




















