ದಾವಣಗೆರೆ: ಮಹಿಳೆಯೊಬ್ಬರ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಿ ಆಕೆ ಸಾವಿಗೆ ಕಾರಣವಾಗಿದ್ದ ರಾಟ್‌ವೈಲರ್ ತಳಿಯ ಎರಡು ನಾಯಿಗಳ ಮಾಲೀಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ದೇವರಾಜ ಅರಸು ಬಡಾವಣೆಯ ನಿವಾಸಿ ಶೈಲೇಶಕುಮಾರ್ ಬಂಧಿತ ಆರೋಪಿ. ಗ್ರಾಮೀಣ ಠಾಣೆಯ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿ, ಇಲ್ಲಿನ ಚಿತ್ರಮಂದಿರವೊಂದರ ಮಾಲೀಕರ ಅಳಿಯನಾಗಿರುವ ಶೈಲೇಶಕುಮಾರ್ ರಾಟ್‌ವೀಲರ್ ತಳಿಯ 3 ನಾಯಿಗಳನ್ನು ಸಾಕಿದ್ದರು. ಈ ಪೈಕಿ ತೀವ್ರ ಆಕ್ರಮಣಕಾರಿಯಾಗಿದ್ದ 2 ನಾಯಿಗಳು ಶೈಲೇಶಕುಮಾರ್ ಹಾಗೂ ಅವರ ಮಾವನ ಮೇಲೆಯೇ ಎರಡ್ಮೂರು ಬಾರಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ್ದವು. ಇದರಿಂದ ಬೇಸತ್ತು ನಾಯಿಗಳನ್ನು ರಾತ್ರೋರಾತ್ರಿ ಹೊನ್ನೂರು ಗೊಲ್ಲರಹಟ್ಟಿ ಸಮೀಪ ಬಿಟ್ಟುಬಂದಿದ್ದರು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಮಲ್ಲಶೆಟ್ಟಿಹಳ್ಳಿಗೆ ಗುರುವಾರ ರಾತ್ರಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಅನಿತಾ ಎಂಬುವರ ಮೇಲೆ ಈ ನಾಯಿಗಳು ತೀವ್ರ ದಾಳಿ ನಡೆಸಿದ್ದವು. ಗಂಭೀರ ಗಾಯಗೊಂಡಿದ್ದ ಅವರು ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗ್ರಾಮಸ್ಥರು ಸೆರೆ ಹಿಡಿದಿದ್ದ ಎರಡೂ ನಾಯಿಗಳು ಶನಿವಾರ ಸಾವನ್ನಪ್ಪಿವೆ.
ಶೈಲೇಶಕುಮಾರ್ ಹಲವು ವರ್ಷಗಳಿಂದ ರಾಟ್‌ವೀಲರ್ ತಳಿಯ ನಾಯಿಗಳನ್ನು ಸಾಕುತ್ತಿದ್ದರು. ಹಾಗಿದ್ದರೂ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸಲು ಕಾರಣ ಏನು ಎಂಬ ಬಗ್ಗೆ ಮಾಹಿತಿ ದೊರೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.




















