ಬೆಂಗಳೂರು: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶ್ಲಾಘಿಸಿದ್ದಾರೆ.
ಈ ಸಂದರ್ಭವನ್ನು ಬಳಸಿಕೊಂಡು, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪುರಾಣ ಮತ್ತು ಮಹಾಕಾವ್ಯಗಳನ್ನು ಅಳವಡಿಸುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ಕುಮಾರಸ್ವಾಮಿ, “ಭಾರತದ ಶ್ರೇಷ್ಠ ಪರಂಪರೆ ಮತ್ತು ನಮ್ಮ ಪುರಾಣದ ಹೆಗ್ಗುರುತುಗಳನ್ನು ಮತ್ತಷ್ಟು ಎತ್ತರಕ್ಕೇರಿಸಿ ಸಾರ್ವಕಾಲಿಕಗೊಳಿಸುವ ನಿಟ್ಟಿನಲ್ಲಿ ಪ್ರಧಾನಿಗಳ ದೃಷ್ಟಿಕೋನವು ನಮಗೆಲ್ಲರಿಗೂ ಅನುಕರಣೀಯ,” ಎಂದು ತಿಳಿಸಿದರು.
ಶಿಕ್ಷಣ ಸಚಿವರಿಗೆ ಪತ್ರದ ಮೂಲಕ ಮನವಿ: ಕೇಂದ್ರ ಸಚಿವರ ಪ್ರಮುಖ ಆಶಯವೇನೆಂದರೆ, ಮನುಕುಲದ ದಾರಿದೀಪ ಮತ್ತು ಅರಿವಿನ ಬೆಳಕಾಗಿರುವ ಭಗವದ್ಗೀತೆಯನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಿಗೆ ಮಾತ್ರ ಸೀಮಿತಗೊಳಿಸದೆ, ಶಿಕ್ಷಣದ ಪ್ರತಿ ಹಂತದಲ್ಲಿಯೂ ಕಡ್ಡಾಯ ಪಠ್ಯವಾಗಿಸಬೇಕು ಎಂದು ಮನವಿ ಮಾಡಿದರು.
ಹಾಗೇ ಈ ವಿಷಯದ ಕುರಿತು ಅಗತ್ಯ ಕ್ರಮ ವಹಿಸಲು ಈಗಾಗಲೇ ಕೇಂದ್ರ ಶಿಕ್ಷಣ ಮಂತ್ರಿಗಳಾದ ಧರ್ಮೇಂದ್ರ ಪ್ರಧಾನ್‌ರವರಿಗೆ ಪತ್ರ ಬರೆದು ವಿನಂತಿಸಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾಚೀನ ಭಾರತೀಯ ಜ್ಞಾನ ಪರಂಪರೆಯನ್ನು ಸಮಗ್ರವಾಗಿ ಅಳವಡಿಸಲು ಕುಮಾರಸ್ವಾಮಿ ಈ ನಿಟ್ಟಿನಲ್ಲಿ ತಮ್ಮ ವಿಚಾರವನ್ನ ತಿಳಿಸಿದ್ದಾರೆ.
ರಾಮಾಯಣ, ಮಹಾಭಾರತ ಬೋಧನೆ ಅಗತ್ಯ: ಭಗವದ್ಗೀತೆಯ ಜೊತೆಗೆ, ನಮ್ಮ ದೇಶದ ಅನರ್ಥ್ಯ ಸಂಪತ್ತೆಂದು ಪರಿಗಣಿಸಲಾದ ಎರಡು ಮಹಾಕಾವ್ಯಗಳನ್ನೂ ಮಕ್ಕಳಿಗೆ ಬೋಧನೆ ಮಾಡುವುದು ಅಗತ್ಯ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು. ಅವುಗಳೆಂದರೆ, ವಾಲ್ಮೀಕಿ ವಿರಚಿತ ರಾಮಾಯಣ ಮತ್ತು ವ್ಯಾಸ ವಿರಚಿತ ಮಹಾಭಾರತ.
ಸಂಕ್ಷಿಪ್ತವಾಗಿ, ಕುಮಾರಸ್ವಾಮಿ ಹೇಳಿಕೆಯು ಆಧುನಿಕ ಶಿಕ್ಷಣದಲ್ಲಿ ಭಾರತೀಯ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಒಗ್ಗೂಡಿಸುವ ಕಡೆಗೆ ಗಮನ ಹರಿಸಿದೆ ಎನ್ನಲಾಗುತ್ತಿದೆ.























