ಕ್ರಾಂತಿ-ಭ್ರಾಂತಿಗಳ ಗುಂಗಿನಲ್ಲಿ ಜನರ ಮರೆತರಲ್ಲ!

1
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಸರ್ಕಾರ ಅನಿಶ್ಚತೆ, ಅತಂತ್ರ, ಅದರದ್ದೇ ಗೊಂದಲಗಳಲ್ಲಿ ಇದೆ ಎನ್ನುವಾಗ ಅಧಿಕಾರಶಾಹಿ ಇದರ ದುರ್ಲಾಭ ಪಡೆದುಕೊಳ್ಳುತ್ತದೆ. ಆಡಳಿತ ಯಂತ್ರವನ್ನು ಇನ್ನಷ್ಟು ದುರ್ಬಲಗೊಳಿಸುತ್ತ ಜನವಿರೋಧಿ ಕಾರ್ಯದಲ್ಲಿ ತೊಡಗುತ್ತಾರೆ. ಈಗ ಆಗಿರುವುದೂ ಹಾಗೇ. ಜನರ ಸಮಸ್ಯೆಗಳ ಕಡೆ ಸ್ಪಂದನೆ- ಗಮನವೇ ಇಲ್ಲ!

ಕೈಗೆ ಕೆಲಸ ಕೊಡಿ. ಸರ್ಕಾರದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ… ಧಾರವಾಡದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಯುವಕರು ಈ ಘೋಷಣೆಗಳೊಂದಿಗೆ ಬೀದಿಗಿಳಿದರು. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ, ಬೆಂಬಲ ಬೆಲೆ ಘೋಷಿಸಿ… ಉತ್ತರ ಕರ್ನಾಟಕದ ರೈತಾಪಿ ಮಂದಿ ಧರಣಿ, ಸತ್ಯಾಗ್ರಹ, ಪ್ರತಿಭಟನೆ ನಡೆಸಿದರು.

ಸಕ್ಕರೆ ಕಾರ್ಖಾನೆಗಳ ವಂಚನೆ ತಪ್ಪಿಸಿ. ನ್ಯಾಯಯುತ ತೂಕ ಹಾಗೂ ಬೆಂಬಲ ಬೆಲೆ ಘೋಷಿಸಿ ಎಂದು ಕಬ್ಬು ಬೆಳೆಗಾರರು ರಾಜ್ಯಾದ್ಯಂತ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 70ಕ್ಕೂ ಹೆಚ್ಚು ಲಾರಿಗಳು ಭಸ್ಮವಾದವು. ಒಂದು ಸ್ಪಂದನೆರಹಿತ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸದಿದ್ದರೆ ಏನೆಲ್ಲ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದೀತು ಎನ್ನುವುದಕ್ಕೆ ಇವು ಕೆಲವು ಘಟನೆಗಳಷ್ಟೇ.

ಕಳೆದ ಎರಡು ತಿಂಗಳಿನಿಂದೀಚೆ ಅಧಿಕಾರ ಹಸ್ತಾಂತರ, ಮುಖ್ಯಮಂತ್ರಿ ಬದಲಾವಣೆ, ಸಂಪುಟ ವಿಸ್ತರಣೆ ಇತ್ಯಾದಿ ಗೊಂದಲ ಗೋಜಲುಗಳು, ಭಿನ್ನಮತದ ಸುಳಿಯಲ್ಲಿ ಸಿಲುಕಿ ಒದ್ದಾಡಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಕೆ ನಂತರ ನಿಧಾನವಾಗಿ ಜನಾಕ್ರೋಶಕ್ಕೆ ಗುರಿಯಾದಂತಿದೆ. ಸಾರ್ವಜನಿಕರ ಸಹನೆಯ ಪರೀಕ್ಷೆಯನ್ನು ಮಾಡುವಂತಿದೆ.

ಒಂದು ನಿಶ್ಚಿತ, ದೃಢ ನಿಲುವಿನ, ಸ್ಪಷ್ಟ ಆಡಳಿತ ವ್ಯವಸ್ಥೆಯ ಸರ್ಕಾರ ಅತಂತ್ರ ಅನಿಶ್ಚಿತತೆ ವಾತಾವರಣ ಮೂಡಿಸಿದರೆ ಹೇಗಾದೀತು ಎನ್ನುವುದಕ್ಕೆ ಬಹುಶಃ ಈಗ ಕರ್ನಾಟಕದ ಎರಡು ತಿಂಗಳ ವಿದ್ಯಮಾನಗಳೇ ನಿದರ್ಶನ. ಧಾರವಾಡದ ಯುವಕರು ಬೀದಿಗಿಳಿಯಲು ಕಾರಣವಿದೆ. ಕಳೆದ ಆರು ವರ್ಷಗಳಿಂದ ಸರ್ಕಾರಿ ನೇಮಕಾತಿಗಳು ಆಗಿಲ್ಲ. ಸುಮಾರು ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಇನ್ನು ಸರ್ಕಾರವೇ ಹೊರಗುತ್ತಿಗೆ ಸಿಬ್ಬಂದಿ ಪಡೆದು ಸರ್ಕಾರಿ ಕೆಲಸಗಳನ್ನು ನಿರ್ವಹಿಸುತ್ತಿದೆ.

ಕೆಪಿಎಸ್‌ಸಿ ಮತ್ತು ವಿವಿಧ ಇಲಾಖೆಗಳ ನೇರ ನೇಮಕಾತಿ ಇತ್ಯಾದಿಗಳನ್ನು ಮಾಡದೇ ಕೇವಲ ಘೋಷಣೆಯಷ್ಟನ್ನೇ ಮಾಡುತ್ತ ನಿರುದ್ಯೋಗಿ ಯುವಕರ ಮೂಗಿಗೆ ತುಪ್ಪ ಸವರುವ ಯತ್ನ ನಡೆಸಿದ ಪರಿಣಾಮ ಯುವಕರೀಗ ಆಕ್ರೋಶಗೊಂಡಿದ್ದಾರೆ. ವಯೋಮಿತಿ ಸಡಿಲಿಕೆ ಇಲ್ಲ. ಸರ್ಕಾರಿ ಹುದ್ದೆಗಳ ಭರ್ತಿ ಇಲ್ಲ. ನಡೆದ ಪರೀಕ್ಷೆಗಳ ಫಲಿತಾಂಶವಿಲ್ಲ. ಪ್ರಕಟಣೆ ಹೊರಡಿಸಿ ನೇಮಕಾತಿ ಆದೇಶ ನೀಡುವವರೆಗಿನ ಹಂತದ ಪ್ರಕ್ರಿಯೆಗಳನ್ನೇ ನಡೆಸದೇ ಕಾಲಹರಣವಾಗುತ್ತಿದೆ. ಇದರೊಟ್ಟಿಗೆ ಸರ್ಕಾರವೇ ಸೃಷ್ಟಿಸಿದ ಒಳಮೀಸಲಾತಿ ಗೊಂದಲ.

ಮೂರವರೆ ವರ್ಷಗಳ ಹಿಂದೆಯೇ ರಾಜ್ಯದ ಗೆಜೆಟೆಡ್ ಅಧಿಕಾರಿಗಳ (ಕಾರ್ಮಿಕ ಇಲಾಖೆ, ಸಾರಿಗೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಆರೋಗ್ಯ ಇಲಾಖೆಗಳ) ವಿವಿಧ ಹುದ್ದೆಗಳಿಗೆ ಪರೀಕ್ಷೆ ಬರೆದು 3 ಸಾವಿರಕ್ಕೂ ಅಧಿಕ ಹುದ್ದೆಗಳ ಫಲಿತಾಂಶಕ್ಕೆ ಕಾಯುತ್ತಿರುವ ಸಹಸ್ರಾರು ಅಭ್ಯರ್ಥಿಗಳ ವಯಸ್ಸು ಈಗ ಇಪ್ಪತ್ತೊಂಬತ್ತು ದಾಟಿದೆ. ನಿಮ್ಮ ಸರ್ಕಾರದ ತಪ್ಪಿಗೆ ನಮ್ಮ ಮಗು ನಿರುದ್ಯೋಗಿಯಾಗಿದ್ದಾನೆ ಎಂಬ ಪಾಲಕರ ನೋವು ಹೇಳತೀರದಾಗಿದೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಯುವಕರು ಹತಾಶರಾಗಿದ್ದಾರೆ. ಇನ್ನೆಷ್ಟು ದಿನ ಪಾಲಕರ ಹಣದಲ್ಲಿ ಬದುಕುವುದು ಎನ್ನುವ ಚಿಂತೆ ಅವರಲ್ಲಿದೆ. ಪರೀಕ್ಷೆ ಸಿದ್ಧತೆಗಾಗಿ ಟ್ಯೂಷನ್ ಕ್ಲಾಸ್‌ಗಳು ರಾಜ್ಯಾದ್ಯಂತ ತಲೆ ಎತ್ತಿವೆ. ಅದರಲ್ಲೂ ಧಾರವಾಡ, ಮಂಗಳೂರು, ದಾವಣಗೆರೆ, ಬೆಂಗಳೂರು ಮಹಾನಗರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಿವೆ. ಅವು ಕೂಡ ಉದ್ಯೋಗದ ಪ್ರಕಟಣೆಯೇ ಇಲ್ಲದೇ ಬಂದ್ ಆಗುವ ಸ್ಥಿತಿ ಇದೆ.

ಈಗ ಧಾರವಾಡದಲ್ಲಿ ನಡೆದ ಪ್ರತಿಭಟನೆ, ಮಂಗಳೂರು, ಕಲಬುರ್ಗಿ, ಬೆಂಗಳೂರು ಮಹಾನಗರಗಳಲ್ಲಿ ಶುರುವಾಗದು ಎನ್ನಲಾಗದು. ಹಾಗೇನಾದರೂ ಆದರೆ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆಯ ಜೊತೆಗೆ ಯುವ ಜನರ ಆಕ್ರೋಶ ಭುಗಿಲೇಳಲಿದೆ. ಕಬ್ಬು ಬೆಳೆಗಾರರದ್ದೇ ನೋಡಿ. ಕಳೆದ ಫೆಬ್ರವರಿ- ಮಾರ್ಚ್ನಲ್ಲೇ ಘೋಷಣೆಯಾಗಬೇಕಿದ್ದ ಬೆಲೆ ಅಕ್ಟೋಬರ್‌ನಲ್ಲೂ ಆಗದಿರುವುದರಿಂದ ಇವರು ಆಕ್ರೋಶಗೊಂಡರು. ಕಾರ್ಖಾನೆಗಳು ಮತ್ತು ರೈತ ಪ್ರತಿನಿಧಿಗಳ ಜೊತೆ ಮೊದಲೇ ಸಂವಾದ ಏರ್ಪಡಿಸಿದ್ದರೆ ಇಷ್ಟೆಲ್ಲ ದಾಂಧಲೆಗಳೇ ಆಗುತ್ತಿರಲಿಲ್ಲ.

ಸರ್ಕಾರಕ್ಕೆ ವೈಜ್ಞಾನಿಕ ಮತ್ತು ವಾಸ್ತವ ಸ್ಥಿತಿ ಅರಿಯುವ ಮನಸ್ಸಿಲ್ಲದಿದ್ದರೆ ಅಥವಾ ಇದನ್ನು ನಿಭಾಯಿಸುವುದಕ್ಕಿಂತ ರಾಜಕಾರಣವೇ ಮುಖ್ಯವಾದರೆ ಆಗುವುದೇ ಹೀಗೆ. ಸಕ್ಕರೆ ಕಾರ್ಖಾನೆಗಳನ್ನೆಲ್ಲ ಅಧಿಕಾರಸ್ಥರೇ ನಿಭಾಯಿಸುವುದರಿಂದ, ರೈತರ ಗೋಳನ್ನು ಹತ್ತಿಕ್ಕುವುದೇ ಆದ್ಯತೆಯಾದಾಗ ಇಂತಹ ಆಕ್ರೋಶ ಹೊರಹೊಮ್ಮುತ್ತದೆ.

ಮೆಕ್ಕೆ ಜೋಳ ಈಗ ಮಾರುಕಟ್ಟೆಗೆ ಬಂದಿದೆ. ಸುಮಾರು 20 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ರಾಜ್ಯದಲ್ಲಿ ಲಭ್ಯವಿದೆ. ರೈತ ಬೆಂಬಲ ಬೆಲೆಗೆ ಆಗ್ರಹಿಸಿ, ಖರೀದಿ ಕೇಂದ್ರ ತೆರೆಯಿರಿ ಎಂದಾಗಲೂ ಅದರ ಬಗ್ಗೆ ಚಿಂತನೆಯೇ ನಡೆದಿಲ್ಲ. ಕೃಷಿ ಇಲಾಖೆ, ಮಾರುಕಟ್ಟೆ ಇಲಾಖೆ ಎಲ್ಲ ಮಾಹಿತಿ ನೀಡಿದರೂ, ನಿರ್ಧಾರ ತೆಗೆದುಕೊಳ್ಳಬೇಕಾದವರೇ ಮಂತ್ರಿ ಸ್ಥಾನ, ರಾಜಕಾರಣದ ಆಟೋಟದ ಗುಂಗಿನಲ್ಲಿದ್ದರೆ ಆಗುವುದೇ ಹೀಗಲ್ಲವೇ?

ನಮ್ಮ ರಾಜ್ಯಕ್ಕೆ ಎಥಿನಾಲ್ ಉತ್ಪಾದನೆಯ ಅನುಮತಿ ಕೂಡ ಕಡಿಮೆ ಎಂದು ಈಗ ತಿಳಿದಿದ್ದಲ್ಲ. ಕೇಂದ್ರಕ್ಕೆ ಮೊದಲೇ ಈ ಸಮಸ್ಯೆಯ ಬಗ್ಗೆ ಗಮನ ಸೆಳೆಯಬಹುದಿತ್ತು. ಎಥಿನಾಲ್ ಜಾಸ್ತಿ ಉತ್ಪಾದಿಸಲು ನಮ್ಮಲ್ಲಿ ಮೆಕ್ಕೆಜೋಳ ಸಾಕಷ್ಟಿದೆ, ಅವಕಾಶ ಕೊಡಿ ಎಂದು ಹೇಳಬಹುದಿತ್ತು. ತನ್ನ ಕುತ್ತಿಗೆಯನ್ನು ಬಿಗಿ ಹಿಡಿದಾಗ ಕೊಸರಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ.

ನಿಜ. ಸಕ್ಕರೆ, ಮೆಕ್ಕೆಜೋಳ, ಭತ್ತ, ಈರುಳ್ಳಿ ಎಲ್ಲವೂ ಹೊರರಾಜ್ಯ, ಹೊರ ದೇಶ, ಕೇಂದ್ರದ ನೀತಿಗಳ ಪರಿಣಾಮಕ್ಕೆ ಒಳಗಾಗುತ್ತವೆ. ಆದರೆ ಹಾಗಂತ ಸಂಘರ್ಷಕ್ಕಿಳಿಯುವ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತಲ್ಲವೇ? ಪರಿಹಾರ ಕಂಡುಕೊಳ್ಳಬೇಕಿತ್ತಲ್ಲವೇ? ಸರ್ಕಾರ ಅನಿಶ್ಚತೆ, ಅತಂತ್ರ, ಅದರದ್ದೇ ಗೊಂದಲಗಳಲ್ಲಿ ಇದೆ ಎನ್ನುವಾಗ ಅಧಿಕಾರಶಾಹಿ ಇದರ ದುರ್ಲಾಭ ಪಡೆದುಕೊಳ್ಳುತ್ತದೆ. ಆಡಳಿತ ಯಂತ್ರವನ್ನು ಇನ್ನಷ್ಟು ದುರ್ಬಲಗೊಳಿಸುತ್ತ ಜನವಿರೋಧಿ ಕಾರ್ಯದಲ್ಲಿ ತೊಡಗುತ್ತಾರೆ.

ಈಗ ಆಗಿರುವುದೂ ಹಾಗೇ. ಜನರ ಸಮಸ್ಯೆಗಳ ಕಡೆ ಸ್ಪಂದನೆ- ಗಮನವೇ ಇಲ್ಲ! ಅತಿವೃಷ್ಟಿ ನಷ್ಟ, ನೆರೆ-ನೆಗಸು ಹಾನಿ ಕೇವಲ ಸಮೀಕ್ಷೆಗೆ ಸೀಮಿತವಾಯಿತು. ರಸ್ತೆ ಹೊಂಡ, ತಗ್ಗು ಖಜಾನೆ ಖಾಲಿಯಾಗಿರುವುದನ್ನು ಬೆತ್ತಲೆಗೊಳಿಸಿತು. ಬೆಳೆ ವಿಮೆ ಕಳೆದ ಜುಲೈನಲ್ಲೇ ಬರಬೇಕಿತ್ತು. ಅತಿವೃಷ್ಟಿ ತೀವ್ರವಾಗಿ ಬಹುತೇಕ ಕಡೆ ಶೇ. 30ರಷ್ಟೂ ಬೆಳೆ ಇಲ್ಲದ ಸ್ಥಿತಿ. ಹಾಗಿದ್ದೂ ಬೆಳೆ ವಿಮೆ ಪರಿಹಾರ ಇನ್ನೂ ಬಂದಿಲ್ಲ. ಜನರ ಆಕ್ರೋಶಕ್ಕೆ ಕಿವಿಗೊಟ್ಟವರಿಲ್ಲ. ಎಂದು ತನ್ನ ಕೈಮೀರುವ ಸ್ಥಿತಿ ಬಂತೋ ಆಗ ವಿಮಾ ಕಂತನ್ನು ಬಿಡುಗಡೆ ಮಾಡಲಾಯಿತು.

ಇಷ್ಟಕ್ಕೂ ಹಾನಿಯಾಗಿದ್ದು ಅಪಾರ, ಪರಿಹಾರ ಅತ್ಯಲ್ಪ. ಅದರಲ್ಲೂ ಪ್ರಾದೇಶಿಕ ಅಸಮಾನತೆ, ಬೆಳೆ ತಾರತಮ್ಯ, ವಿಮಾ ಕಂಪನಿಗಳ ಹಗಲುದರೋಡೆ ಎಲ್ಲವೂ ಕೂಡ ಜನರಿಗೆ ಸಮಸ್ಯೆಯಾಗಿದ್ದರೂ ಪ್ರತಿನಿಧಿಗಳಿಂದ ಮಾತ್ರ ಹುಸಿನಗು ಮತ್ತು ಕಾಲಹರಣ. ಹಾವೇರಿ ಜಿಲ್ಲಾಸ್ಪತ್ರೆಗೆ ರಾಣೆಬೆನ್ನೂರಿನ ಮಹಿಳೆಯೊಬ್ಬಳು ಹೆರಿಗೆಗಾಗಿ ಆಗಮಿಸಿದ್ದಳು. ಮುಂಜಾನೆಯಿಂದಲೇ ನೋವಿನಿಂದ ಒದ್ದಾಡಿದರೂ ವೈದ್ಯಕೀಯ ಸಿಬ್ಬಂದಿ ಪರಿಗಣಿಸಲಿಲ್ಲ.

ಪರಿಣಾಮ, ಪ್ರಾಂಗಣದಲ್ಲೇ ಹೆರಿಗೆಯಾಗಿ, ಮಗುವಿನ ತಲೆ ನೆಲಕ್ಕೆ ಬಡಿದು ಮೊದಲ ಅಳುವಿಗೇ ಮಗುವಿನ ಉಸಿರು ನಿಂತಿತು. ಇಂತಹ ದಾರುಣ ಸ್ಥಿತಿ. ಅದೇ ಮರುದಿನ ಕುಂದಗೋಳದಲ್ಲಿ ಟಾರ್ಚ್ ಬೆಳಕಿನಲ್ಲಿ ವೈದ್ಯಕೀಯ ಸಿಬ್ಬಂದಿ ಸರ್ಜರಿ ನಡೆಸಬೇಕಾಯಿತು. ಜನರೇಟರ್ ಇಲ್ಲ. ಇದ್ದರೂ ಡೀಸಲ್ ಇಲ್ಲ. ಇದು ರಾಜ್ಯದ ಅನೇಕ ಕಡೆಗಳ ವಾಸ್ತವ!!

ಆರೋಗ್ಯ ಇಲಾಖೆಯ 300ಕ್ಕೂ ಅಧಿಕ 108 ಅಂಬ್ಯೂಲೆನ್ಸ್ಗಳು ತುಕ್ಕು ಹಿಡಿದು ವರ್ಷಗಳಿಂದ ಗ್ಯಾರೇಜುಗಳಲ್ಲೋ, ಮೈದಾನದಲ್ಲೋ ಬಿದ್ದಿವೆ. ಇವನ್ನು ವಿಲೇ ಮಾಡಲು ಕೂಡ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಪುರುಸೊತ್ತಿಲ್ಲ. ಪೊಲೀಸರೇ ಜನರ ಸುಲಿಗೆ, ದರೋಡೆಗಿಳಿದರು. ರಾಜಧಾನಿಯಲ್ಲಿ ಸಾರ್ವಜನಿಕ ಸಂಸ್ಥೆಯ ನಿವೃತ್ತ ಉನ್ನತ ಅಧಿಕಾರಿಯೊಬ್ಬರು ತನ್ನ ಮಗಳ ಅಕಾಲಿಕ ಮರಣದ ದಾರುಣ ಸ್ಥಿತಿಯಲ್ಲಿ ಆಸ್ಪತ್ರೆಯ ಚಿಕಿತ್ಸೆ, ಮರಣೋತ್ತರ ಶವಪರೀಕ್ಷೆ, ಮೃತದೇಹ ಪಡೆಯಲು, ಅಂಬುಲನ್ಸ್ನಲ್ಲಿ ಸಾಗಿಸಲು, ಶವ ಸಂಸ್ಕಾರ, ಮರಣ ದಾಖಲೆ ಪತ್ರ ಪಡೆಯುವಲ್ಲಿ ನೀಡಿರುವ ಲಂಚ, ಕಿರುಕುಳ, ಮಾನಸಿಕ ಹಿಂಸೆಗಳನ್ನು ಪರಿಚಿತ ಮಾದ್ಯಮಗಳೆದುರು ತೋಡಿಕೊಂಡರು.. ಸರ್ಕಾರಿ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದರ ಚಿತ್ರಣ ಅದಾಗಿತ್ತು!

ಸಮಾಜಕ್ಕೆ ಸರರ್ಕಾರದ ಸ್ಪಂದನೆ, ಬಿಗು ಆಡಳಿತ ಇಲ್ಲದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ನವೆಂಬರ್ ಕ್ರಾಂತಿ- ಭ್ರಾಂತಿ ಜನರ ಆಕ್ರೋಶಕ್ಕೆ ಕಾರಣವಾದೀತೇನೋ ಅಲ್ಲವೇ? ಹಾಗೆಯೇ ಮತ್ತೆ ಅಧಿವೇಶನ ಬಂದಿದೆ… ಬೆಳಗಾವಿಯಲ್ಲಿ. ಅದೇ ಕಥೆ. ಅದೇ ರಾಗ. ಈಗಲೇ ಅಧಿವೇಶನ ನಡೆಯದಂತೆ, ಉತ್ತರ ಕರ್ನಾಟಕ ಭಾಗದ ಚರ್ಚೆಯಾಗದಂತೆ ಏನೆಲ್ಲ ಉಪಾಯ ಹೂಡಬೇಕು ಎನ್ನುವುದಕ್ಕೆ ಇಲ್ಲಿನವರೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಂತರ `ವ್ಯರ್ಥ ಕಲಾಪ; ದುಂದು ವೆಚ್ಚ’ ಇದು ಅಧಿವೇಶನ ಮುಗಿದ ನಂತರದ ತಲೆಬರಹ!!

Previous articleಕುಖ್ಯಾತ ಮಾದಕ ವಸ್ತು ವ್ಯಾಪಾರಿ ಬಂಧನ
Next articleಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹ

1 COMMENT

LEAVE A REPLY

Please enter your comment!
Please enter your name here