ಬ್ರೇಕ್‌ಫಾಸ್ಟ್ ಮೀಟಿಂಗ್ ಬರೀ ಟೀಸರ್

1
6

ನವದೆಹಲಿ: ಸಿಎಂ ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬರೀ ಟೀಸರ್, ಸಿನೆಮಾ ಇನ್ನೂ ಬಾಕಿ ಇದೆ. ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವೇ ದಿನದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು ಎನ್ನುವುದು ಹೊರಬೀಳಲಿದೆ. ಇವರಿಬ್ಬರೂ ಒಬ್ಬರಿಗೊಬ್ಬರು ಬ್ರೇಕ್‌ಫಾಸ್ಟ್ ಮಾಡುತ್ತ ಕಾಲಹರಣ ಮಾಡುತ್ತಿದ್ದರೆ ರಾಜ್ಯದ ಜನರ ಶ್ರೇಯೋಭಿವೃದ್ಧಿ ಯಾರು ಮಾಡುತ್ತಾರೆ ಎನ್ನುವುದು ನಮ್ಮ ಕಾಳಜಿ. ಒಬ್ಬರು ಕುರ್ಚಿಯನ್ನು ಕಸಿಯಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಬ್ಬರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದ ನಾಟಕ ನಿಲ್ಲಬೇಕು ಎನ್ನುವುದು ರಾಜ್ಯದ ಜನರ ಇಚ್ಛೆಯಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯಿತು. ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಗೊಂದಲ ನಿವಾರಿಸುವಲ್ಲಿ ವಿಫಲವಾಗಿದೆಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿದೆ ಕಾಂಗ್ರೆಸ್ ಹೈಕಮಾಂಡ್, ಯಾರು ಹೈಕಮಾಂಡ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ತಮ್ಮ ಮೇಲೆ ಹೈಕಮಾಂಡ್ ಇದೆ ಎಂದು ಹೇಳಿದ ಮೇಲೆ ಹೈಕಮಾಂಡ್‌ಗೆ ಏನು ಅರ್ಥ ಇದೆ. ಇದು ಒಂದು ಕುಟುಂಬದ ವಿಷಯ ಆಗಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ರಾಜಕೀಯ ಏಳು ಬೀಳುಗಳು ಪಕ್ಷಗಳ ನಡುವೆ ನಡೆಯುತ್ತವೆ. ಆದರೆ, ಇಬ್ಬರು ಹಿರಿಯ ನಾಯಕರು ‌ರಾಜ್ಯದ ಜನರನ್ನು ಮೂರ್ಖರು ಎಂದು ತಿಳಿದುಕೊಂಡಿದ್ದಾರಾ ಅವರು ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎನ್ನುವ ಬಗ್ಗೆ ಇಷ್ಟೆಲ್ಲಾ ಸರ್ಕಸ್ ನಡೆದರೂ ಕರ್ನಾಟಕವನ್ನು ತಮ್ಮ ರಾಜಕೀಯ ಕುರ್ಚಿಗಾಗಿ ಬಳಸಿಕೊಂಡು ಈಗ ಇಬ್ಬರೂ ಸೇರಿ ಬ್ರೇಕ್‌ಫಾಸ್ಟ್ ಮಾಡಿ ಏನು ನಡೆದಿಲ್ಲ ಎಂದರೆ ಜನರನ್ನು ಬಹಳ ತಪ್ಪಾಗಿ ತಿಳಿದುಕೊಂಡಿದ್ದಾರೆ. ಬಹಳ ಬಾಲಿಶವಾಗಿ ನಡೆದುಕೊಳ್ಳುತ್ತಿದ್ದಾರೆ. ಎರಡನೆಯದಾಗಿ ಹೈಕಮಾಂಡ್ ಹೇಳಿದ ಮೇಲೆ ಇಬ್ಬರೂ ಸೇರಿ ಬ್ರೇಕ್‌ಫಾಸ್ಟ್ ಮಾಡುತ್ತಿದ್ದೇವೆ ಎಂದು ಹೇಳಿದರೆ ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ ಅಂತ ಅರ್ಥ. ಪರಸ್ಪರ ಒಪ್ಪಂದ ಆಗಿಲ್ಲ ಅಂತ ಅರ್ಥ ಆಯಿತು ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ಉಳದಿಲ್ಲ: ರೈತರು ಸಂಕಷ್ಟದಲ್ಲಿ ಇದ್ದಾರೆ. ಬೀದಿಗೆ ಬಿದ್ದು ಹೋರಾಟ ಮಾಡುತ್ತಿದ್ದಾರೆ. ಬೆಳೆ ನಾಶ ಆಗಿದೆ. ಹಲವಾರು ಸಮಸ್ಯೆಗಳಿವೆ. ಶಿಕ್ಷಣ ಅಂತೂ ಅಧೋಗತಿಗೆ ಹೋಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮೂರು ಬಾರಿ ಮಾಡುವುದನ್ನು ಎಲ್ಲಿಯಾದರೂ ನೋಡಿದ್ದೀರಾ ಹದಿನೈದು ಇಪ್ಪತ್ತು ಮಾರ್ಕಸ್‌ಗೆ ಎಸ್ಸೆಸ್ಸೆಲ್ಸಿ ಪಾಸ್ ಮಾಡುವುದು, ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಇಷ್ಟೆಲ್ಲ ಆದರೂ ಸಿಎಂ ತಮಗೇನು ಸಂಬಂಧ ಇಲ್ಲ ಅಂತ ನಡೆದುಕೊಳ್ಳುತ್ತಿದ್ದಾರೆ. ಅಷ್ಟೆಯಲ್ಲ ಎಸ್ಸಿ, ಎಸ್ಟಿ, ಒಬಿಸಿ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಎಸ್ಸಿಪಿ ಟಿಎಸ್‌ಪಿಗೆ ಮೀಸಲಿಟ್ಟ ಹಣ, ಒಬಿಸಿಗೆ ಮೀಸಲಿಟ್ಟ ಹಣ ಖರ್ಚು ಮಾಡಿಲ್ಲ. ಒಬಿಸಿಗೆ ಮೀಸಲಿಟ್ಟ 441 ಕೋಟಿ ರೂ. ಜಾತಿ ಗಣತಿಗೆ ಖರ್ಚು ಮಾಡಿದ್ದಾರೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರ ಮಾಡುವುದರಲ್ಲಿ ದೊಡ್ಡ ಮಟ್ಡದ ಪೈಪೋಟಿ ನಡೆಯುತ್ತಿದೆ. ಇದೆಲ್ಲ ಕಾಂಗ್ರೆಸ್ ಹೈಕಮಾಂಡ್ ಹೈಕಮಾಂಡ್ ಆಗಿ ಉಳಿದೆಯಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.

Previous articleಪ್ರಯಾಣಿಕರಿಗೆ ಸುರಕ್ಷತೆ ಹೆಚ್ಚಿಸಲು ಮುಂದಾದ ಜಿಯೋ
Next articleಇಂಡಿಗೋ ಅಡಚಣೆ: 200ಕ್ಕೂ ಹೆಚ್ಚು ವಿಮಾನಗಳು ರದ್ದು

1 COMMENT

LEAVE A REPLY

Please enter your comment!
Please enter your name here