ಇ-ಸ್ವತು ೨.೦ ತಂತ್ರಾಂಶಕ್ಕೆ ಚಾಲನೆ

0
35

ಬೆಂಗಳೂರು: ಹಿಂದುಳಿದವರ, ದಲಿತರ ಹಾಗೂ ಮಹಿಳೆಯರ ಮೀಸಲಾತಿಯನ್ನು ವಿರೋಧಿಸಿದ್ದು ಬಿಜೆಪಿ, ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಈಗಿರುವ ಶೇ.50 ರಷ್ಟು ಮಹಿಳಾ ಮೀಸಲಾತಿ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಕೊಡುಗೆ. ಇದನ್ನು ವಿರೋಧ ಮಾಡಿದ್ದು ಬಿಜೆಪಿಯ ಉಪಾಧ್ಯಕ್ಷರಾಗಿದ್ದ ರಾಜ್ಯ ಸಭಾ ಸದಸ್ಯ ರಾಮಾಜೋಯಿಸ್. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಬಿಜೆಪಿಗೆ ಚಪ್ಪಾಳೆ ತಟ್ಟಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಇ-ಸ್ವತ್ತು 2.0 ತಂತ್ರಾಂಶದ ಚಾಲನೆ ಸಮಾರಂಭದಲ್ಲಿ ಮಾತನಾಡಿ ಗ್ರಾಮದಿಂದ ರಾಜಧಾನಿಗೆ ಹೀಗೆ ಅಧಿಕಾರ ವಿಕೇಂದ್ರೀಕರಣ ಆಗಬೇಕು ಎನ್ನುವುದು ಗಾಂಧಿ, ನೆಹರೂ, ಲೋಹಿಯಾ ಅವರ ಕನಸಾಗಿತ್ತು. ನಮ್ಮದು ಹಳ್ಳಿಗಳ ದೇಶ. ಗ್ರಾಮ ಭಾರತ ಅಭಿವೃದ್ಧಿ ಆಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ.

ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ರಾಜೀವ್ ಗಾಂಧಿಯವರು ಪ್ರಧಾನಿ ಆದಾಗ ಸಂವಿಧಾನ ಪರಿಚ್ಛೇದ 73, 74 ಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ತಂದರು. ಈ ತಿದ್ದುಪಡಿ ಬರುವವರೆಗೂ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿಯೇ ಇರಲಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಬಿಜೆಪಿಯ ರಾಮಾಜೋಯಿಸ್ ಮೀಸಲಾತಿ ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದರು. ಆದರೆ, ಸುಪ್ರೀಂಕೋರ್ಟ್ ಮೀಸಲಾತಿ ಪರವಾಗಿ ನಿಂತು ಬಿಜೆಪಿಯ ರಾಮಾ ಜೋಯಿಸ್ ಅರ್ಜಿಯನ್ನು ತಿರಸ್ಕರಿಸಿತು.

ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ನಾಮಕಾವಾಸ್ಥೆಗೆ ಪ್ರಧಾನಿ ಅವರ ಹೆಸರಿನಲ್ಲಿದೆ. ಇದರಲ್ಲಿ ರಾಜ್ಯದ ಪಾಲೇ ಹೆಚ್ಚು. ಕೇಂದ್ರದಿಂದ ಇನ್ನೂ 13 ಸಾವಿರ ಕೋಟಿ ಹಣ ರಾಜ್ಯಕ್ಕೆ ವಾಪಾಸ್ ಬರಬೇಕಿದೆ. ಕೇಂದ್ರ ಮಾಡುವ ಅನ್ಯಾಯವನ್ನು ರೈತರು ಮತ್ತು ರಾಜ್ಯದ ಜನತೆ ವಿರೋಧಿಸಬೇಕು. ಕಬ್ಬಿನ ದರ ನಿಗಧಿಯಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಂದ ರೈತರಿಗೆ ಅನ್ಯಾಯವಾಯಿತು. ಆದರೂ ರಾಜ್ಯ ಸರ್ಕಾರ ಸರಿದೂಗಿಸಿ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸ್ಪಂದಿಸಿ ಪರಿಹಾರ ನೀಡಿತು.

ಇ-ಸ್ವತ್ತು ತಂತ್ರಾಂಶದಿಂದ ಸದ್ಯ 1,778 ಕೋಟಿ ತೆರಿಗೆ ಆದಾಯ ಹೆಚ್ಚಾಗುವ ಅಂದಾಜಿದೆ. ತಂತ್ರಾಂಶ ಪರಿಣಾಮಕಾರಿ ಜಾರಿ ಆದರೆ, ಆದಾಯದ ಪ್ರಮಾಣ 2,000 ಕೋಟಿ ಮೀರುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕ‌ ಭಾಗದಲ್ಲಿ 8860ಕಿಮೀ ಕಲ್ಯಾಣ ಪಥಕ್ಕೆ ಚಾಲನೆ ನೀಡಿದ್ದು ನಮ್ಮ ಸರ್ಕಾರ. ಈ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು, ಬಿಜೆಪಿಯವರು ಜನಪರ ಕೆಲಸ ಮಾಡುತ್ತಿರುವ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತರಲು ಹೊರಟಿದ್ದಾರೆ.

ನಮ್ಮ ಭಾಗ್ಯಗಳು, ನಮ್ಮ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿನ ಭದ್ರತೆಗಾಗಿ ಜಾರಿ ಮಾಡಿದ್ದು. ಬಿಜೆಪಿಯ ಬುರುಡೆ ಗ್ಯಾಂಗ್ ಇಂತಹ ಯಾವುದೇ ಕಾರ್ಯಕ್ರಮ ನೀಡದೆ ಜನರ ಎದುರು ಬುರುಡೆ ಬಿಡುತ್ತಾ ತಿರುಗುತ್ತಿದ್ದಾರೆ‌.

ನಾನೂ ತಾಲ್ಲೂಕ ಬೋರ್ಡ್ ಸದಸ್ಯನಾಗಿ ಈಗ ಮುಖ್ಯಮಂತ್ರಿವರೆಗೂ ಬೆಳೆದಿದ್ದೇನೆ. ಹೀಗಾಗಿ ಗ್ರಾಮ ಪಂಚಾಯ್ತಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಹೆಚ್ಚೆಚ್ಚು ಶಕ್ತಿಯುತವಾಗಬೇಕು ಎನ್ನುವುದು ನನ್ನ ಗುರಿಯೂ ಆಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಗ್ರಾಮ ಕರ್ನಾಟಕ ಅಭಿವೃದ್ಧಿ ಕಾಣುತ್ತದೆ ಎನ್ನುವ ಭರವಸೆ ನನಗಿದೆ ಎಂದರು.

Previous articleಪ್ರಧಾನಿ ಮೋದಿ ವಾಗ್ದಾಳಿ: ರಾಜಕೀಯ ನಾಟಕ ಬಿಟ್ಟು ರಚನಾತ್ಮಕ ಚರ್ಚೆಗೆ ಬನ್ನಿ, ಬಿಹಾರ ಸೋಲಿನ ಹತಾಶೆ
Next articleಆಳಂದಗೆ ಬಂದ್ರೆ ಮತಗಳ್ಳತನ ಪ್ರಕರಣ ಸಾಬೀತುಪಡಿಸುವೆ: ಬಿ. ಆರ್. ಪಾಟೀಲ್ ಸವಾಲು

LEAVE A REPLY

Please enter your comment!
Please enter your name here