ಮುಂಬೈ: ನವದೆಹಲಿಯಲ್ಲಿ ಗುರುವಾರ ನಡೆದ ಡಬ್ಲ್ಯುಪಿಎಲ್-2026ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು 2025ರ ಚಾಂಪಿಯನ್ ತಂಡದಿಂದ ಹೆಚ್ಚಿನ ಆಟಗಾರ್ತಿಯರನ್ನು ಯಶಸ್ವಿಯಾಗಿ ಮರಳಿ ಪಡೆದುಕೊಂಡಿದೆ. ಹಳೆಯ ಚಾಂಪಿಯನ್‌ಗಳನ್ನು ಮರಳಿ ಕರೆತರುವುದು ತಮ್ಮ ಕಾರ್ಯತಂತ್ರವಾಗಿತ್ತು. ಅದರಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ ಎಂದು ತಂಡದ ಒಡತಿ ನೀತಾ ಎಂ. ಅಂಬಾನಿ ಹೇಳಿದರು.
ಜತೆಗೆ ಎಂಐ ಮಹಿಳಾ ತಂಡಕ್ಕೆ ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್, ಸಜ್ನಾ ಮತ್ತು ಸಂಸ್ಕೃತಿ ಗುಪ್ತಾ ಅವರ ಮರಳುವಿಕೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಅವರು, ನಾಯಕಿ ಹರ್ಮನ್‌ಪ್ರೀತ್ ಕೌರ್, ನ್ಯಾಟ್ ಸ್ಕಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮನ್ಜೋತ್ ಕೌರ್ ಮತ್ತು ಜಿ. ಕಮಲಿನಿ ಅವರನ್ನು ಈಗಾಗಲೇ ಉಳಿಸಿಕೊಳ್ಳಲಾಗಿತ್ತು ಎಂದರು.
“ಹರಾಜಿನ ದಿನ ಯಾವಾಗಲೂ ರೋಮಾಂಚನಕಾರಿಯಾಗಿರುತ್ತದೆ. ವಿಜೇತ ತಂಡವನ್ನು ಸಾಧ್ಯವಾದಷ್ಟು ಮರಳಿ ಕರೆತರುವುದು ನಮ್ಮ ಕಾರ್ಯತಂತ್ರವಾಗಿತ್ತು. ಅಮೆಲಿಯಾ ಕೆರ್ ಅವರನ್ನು ಮತ್ತೆ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ ಮತ್ತು ನಮ್ಮ ನಾಲ್ವರು ‘ಎಸ್’ಗಳಾದ ಶಬ್ನಿಮ್, ಸೈಕಾ, ಸಜ್ನಾ ಮತ್ತು ಸಂಸ್ಕೃತಿ ಮತ್ತೆ ತಂಡದೊಂದಿಗೆ ಇರುವುದು ಅದ್ಭುತವಾಗಿದೆ. ನಾವು ಮೂವರು ಯುವ ಆಟಗಾರ್ತಿಯರಾದ ರಾಹಿಲಾ ಫಿರ್ದೌಸ್, ನಲ್ಲ ಕ್ರಾಂತಿ ರೆಡ್ಡಿ ಮತ್ತು ತ್ರಿವೇಣಿ ವಶಿಷ್ಠ ಅವರನ್ನು ತಂಡಕ್ಕೆ ಸ್ವಾಗತಿಸುತ್ತೇವೆ. ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಪೂನಮ್ ಖೇಮ್ನಾರ್, ಮಿಲ್ಲಿ ಇಲ್ಲಿಂಗ್‌ವರ್ತ್ ಮತ್ತು ನಿಕೋಲಾ ಕ್ಯಾರಿ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ” ಎಂದು ನೀತಾ ಅಂಬಾನಿ ಹೇಳಿದರು.
ಹರಾಜಿನಲ್ಲಿ ಹಾಜರಿದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್, “ಮೊದಲಿಗೆ ನಾವು ಸ್ವಲ್ಪ ಆತಂಕಕ್ಕೊಳಗಾಗಿದ್ದೆವು, ಆದರೆ ನಾವು ಯೋಜಿಸಿದ ರೀತಿ ಮತ್ತು ಎಲ್ಲರ ಭಾಗವಹಿಸುವಿಕೆ, ವಿಶೇಷವಾಗಿ ನೀತಾ ಮೇಡಂ ಪ್ರಯತ್ನ ಅದ್ಭುತವಾಗಿತ್ತು. ಅವರು ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದಾರೆ. ನಮ್ಮೊಂದಿಗೆ ಹಳೆಯ ಮುಖಗಳಿವೆ. ಇದು ಅವರ ಮೇಲೆ ನಮ್ಮ ವಿಶ್ವಾಸ ಮತ್ತು ನಂಬಿಕೆಯನ್ನು ತೋರಿಸುತ್ತದೆ” ಎಂದರು.
ಮುಂಬೈ ಇಂಡಿಯನ್ಸ್ ತಂಡವು ವಿದೇಶಿ ಆಟಗಾರ್ತಿಯರಾದ ಆಸ್ಟ್ರೇಲಿಯಾದ ಆಲ್‌ರೌಂಡರ್ ನಿಕೋಲಾ ಕ್ಯಾರಿ ಮತ್ತು ಯುವ ವೇಗದ ಪ್ರತಿಭೆ ಮಿಲ್ಲಿ ಇಲ್ಲಿಂಗ್‌ವರ್ತ್ ಅವರನ್ನು ಸೇರಿಸಿಕೊಂಡಿದೆ. ಹೊಸ ಭಾರತೀಯ ಪ್ರತಿಭೆಗಳನ್ನು ಉತ್ತೇಜಿಸುವ ಎಂಐ ಧೋರಣೆಗೆ ನಿಷ್ಠೆಯಿಂದ ತಂಡವು ನಲ್ಲಾ ಕ್ರಾಂತಿ ರೆಡ್ಡಿ ಮತ್ತು ತ್ರಿವೇಣಿ ವಸಿಷ್ಠ ಎಂಬ ಭಾರತೀಯ ಆಲ್‌ರೌಂಡರ್‌ಗಳನ್ನು ಕೂಡ ಸೇರಿಸಿಕೊಂಡಿದೆ.
ತಂಡವು ಮರಳಿ ಪಡೆದ ಐದು ಆಟಗಾರ್ತಿಯರು ಹಿಂದೆ ಎಂಐ ಯಶಸ್ಸಿಗೆ ಪ್ರಮುಖ ಕಾರಣರಾಗಿದ್ದರು. ಸೈಕಾ, ಸಜನಾ ಮತ್ತು ಸಂಸ್ಕೃತಿ ಈ ಮೂವರು ಎಂಐ ತಂಡದಿಂದ ಗುರುತಿಸಲ್ಪಟ್ಟು, ತಮ್ಮ ಚೊಚ್ಚಲ ಪಂದ್ಯಗಳನ್ನು ಆಡಿದ ಬಳಿಕ ಲೀಗ್‌ನ ಉದಯೋನ್ಮುಖ ತಾರೆಗಳಾಗಿದ್ದಾರೆ. ಮಧ್ಯಪ್ರದೇಶದ ನಾಯಕಿ ರಹೀಲಾ ಫಿರ್ದೌಸ್ ಮತ್ತು ಪೂನಂ ಖೇಮನಾರ್ ಎಂಬ ಅನುಭವಿ ಆಟಗಾರ್ತಿಯರು ತಂಡಕ್ಕೆ ಉತ್ತಮ ದೇಶೀಯ ಅನುಭವವನ್ನು ತರಲಿದ್ದಾರೆ. ಅನುಭವಿ ತಾರೆಯರು ಮತ್ತು ಹೊಸ ಪ್ರತಿಭೆಗಳ ಮಿಶ್ರಣದೊಂದಿಗೆ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಗಳಾಗಿ ಕಂಡುಬರುತ್ತಿದೆ.
ಮುಂಬೈ ಇಂಡಿಯನ್ಸ್ ತಂಡ:
ರಿಟೇನ್: ನಥಾಲಿಯಾ ಸೀವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಹ್ಯಾಲೆ ಮ್ಯಾಥ್ಯೂಸ್, ಅಮನ್ಜೋತ್ ಕೌರ್, ಜಿ. ಕಮಲಿನಿ.
ಹರಾಜಿನಲ್ಲಿ ಖರೀದಿ: ಅಮೆಲಿಯಾ ಕೆರ್, ಸಜೀವನ್ ಸಜನಾ, ಶಬ್ನಮ್ ಇಸ್ಮಾಯಿಲ್, ನಿಕೋಲಾ ಕ್ಯಾರಿ, ಸೈಕಾ ಇಶಾಕ್, ಸಂಸ್ಕೃತಿ ಗುಪ್ತಾ, ತ್ರಿವೇಣಿ ವಸಿಷ್ಠ, ರಹಿಲಾ ಫಿರ್ದೌಸ್, ಪೂನಂ ಖೆಮ್ನಾರ್, ನಲ್ಲ ಕ್ರಾಂತಿ ರೆಡ್ಡಿ, ಮಿಲ್ಲಿ ಇಲ್ಲಿಂಗ್ವರ್ತ್.


























