ಬೆಂಗಳೂರು: ರಾಜ್ಯದಲ್ಲಿ ಈ ವರ್ಷದ ಮುಂಗಾರು ಮಳೆಯಿಂದಾಗಿ ಭಾರೀ ಮಟ್ಟದಲ್ಲಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಹೆಚ್ಚುವರಿ ಇನ್‌ಪುಟ್ ಸಬ್ಸಿಡಿ ವಿತರಣೆ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಧಿಕೃತ ಚಾಲನೆ ನೀಡಿದರು. ರಾಜ್ಯದ ರೈತ ಸಮುದಾಯಕ್ಕೆ ದೊಡ್ಡ ಮಟ್ಟದ ಪರಿಹಾರ ನೀಡುವ ಉದ್ದೇಶದಿಂದ ಸರ್ಕಾರ ಒಟ್ಟು ರೂ. 1033.60 ಕೋಟಿ ಮೌಲ್ಯದ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಳೆ ಮತ್ತು ಪ್ರವಾಹದಿಂದ ಸಂಕಷ್ಟಕ್ಕೊಳಗಾದ ರೈತರ ನೋವನ್ನು ಮನಗಂಡ ರಾಜ್ಯ ಸರ್ಕಾರವು, ಕೇಂದ್ರದ ಎಸ್‌ಡಿಆರ್‌ಎಫ್ ಮಾನದಂಡಗಳಿಗಿಂತ ಹೆಚ್ಚುವರಿ ಪರಿಹಾರ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
14.24 ಲಕ್ಷ ರೈತರಿಗೆ ರೂ. 1033.60 ಕೋಟಿ ಹೆಚ್ಚುವರಿ ಪರಿಹಾರ: ರಾಜ್ಯದಲ್ಲಿ ಬೆಳೆಹಾನಿಗೊಳಗಾದ 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುವ ಕೆಲಸಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ಮೊತ್ತ ಟಾಪ್‌ಅಪ್ (Top-Up) ರೂಪದಲ್ಲಿ ರಾಜ್ಯ ನಿಧಿಯಿಂದ ಒದಗಿಸಲಾಗುತ್ತಿದೆ. ಈಗಾಗಲೇ ಎಸ್‌ಡಿಆರ್‌ಎಫ್ ನಿಯಮಾವಳಿಗಳಂತೆ ರೂ. 1218.03 ಕೋಟಿ ಸಬ್ಸಿಡಿ ವಿತರಿಸಲಾಗಿತ್ತು. ಈಗ ರಾಜ್ಯ ಸರ್ಕಾರದಿಂದ ಇನ್ನೂ ರೂ. 1033.60 ಕೋಟಿ ಸೇರಿ ಒಟ್ಟು ಪರಿಹಾರ ಮೊತ್ತ ರೂ. 2251.63 ಕೋಟಿ ಆಗಿದೆ.
ಇನ್‌ಪುಟ್ ಸಬ್ಸಿಡಿ ದರದಲ್ಲಿ ದೊಡ್ಡ ಪ್ರಮಾಣದ ಹೆಚ್ಚಳ: ಬೆಳೆಹಾನಿ ಪರಿಹಾರವನ್ನು ರೈತರ ಪರವಾಗಿರುವ ನಿಲುವಿನಿಂದ ಹೆಚ್ಚಿಸಲಾಗಿದೆ. ಗರಿಷ್ಠ 2 ಹೆಕ್ಟೇರ್ ವರೆಗೆ ಸಬ್ಸಿಡಿ ಲಭ್ಯವಿದೆ. ರೈತರ ಪರವಾಗಿರುವ ನಿಲುವು ನಮ್ಮದು. ಅವರ ಕಷ್ಟದ ಹೊತ್ತಿನಲ್ಲಿ ಸರ್ಕಾರ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಅತ್ಯಧಿಕ ಹಾನಿಯ ಜಿಲ್ಲೆಗಳು: ಒಂಬತ್ತು ಜಿಲ್ಲೆಗಳು ಅತ್ಯಂತ ಹೆಚ್ಚಾಗಿ ಹಾನಿಗೊಳಗಾಗಿದ್ದು, ವಿಶೇಷವಾಗಿ: ಧಾರವಾಡ, ಗದಗ, ಹಾವೇರಿ – ಕೊಯ್ಲಿನ ಹಂತದಲ್ಲಿ ಭಾರೀ ಹಾನಿ. ಕಲಬುರಗಿ, ಯಾದಗಿರಿ, ಬೀದರ – ಕೃಷ್ಣಾ ಮತ್ತು ಭೀಮಾ ನದಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಳದಿಂದ ವ್ಯಾಪಕ ಹಾನಿ
ಪರಿಹಾರದಲ್ಲಿ ಪಾರದರ್ಶಕತೆ – ಗ್ರಾಮವಾರು ಪಟ್ಟಿ ಪ್ರಕಟಣೆ: ಬೆಳೆ ಹಾನಿ ಅಂದಾಜು ಮಾಡಲು ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಎಲ್ಲಾ ಮಾಹಿತಿಯನ್ನು: ಭೂಮಿ ಪೋರ್ಟಲ್ FRUITS (Farmer Registration & Unified Beneficiary Information System) ತಂತ್ರಾಂಶಗಳಲ್ಲಿ ಸಂಯೋಜಿಸಲಾಗಿದೆ.
ಪ್ರಧಾನಮಂತ್ರಿಯವರನ್ನು ನವೆಂಬರ್ 17ರಂದು ಭೇಟಿ ಮಾಡಿ, ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿಗೆ ಪ್ರತಿಕ್ರಿಯೆ ಹಾಗೂ ಪರಿಹಾರ ಅಡಿಯಲ್ಲಿ ರೂ. 614.90 ಕೋಟಿ ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಸರಿಪಡಿಸಲು PDNA ಅಡಿಯಲ್ಲಿ ರೂ. 1,521.67 ಕೋಟಿ ಪರಿಹಾರ ಒದಗಿಸಲು ಮನವಿ ಸಲ್ಲಿಸಲಾಗಿದೆ. ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ತಂಡವನ್ನು ರಚಿಸಿದ್ದು, ಈ ತಂಡ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.






















