ಸಾರಿಗೆ ಇಲಾಖೆ ಭರ್ಜರಿ ಬೇಟೆ: ಸುರಕ್ಷತೆ ಇಲ್ಲದ 35 ಪ್ರವಾಸಿ ಬಸ್ ವಶ

0
3

ಕೋಲಾರ: ಕೋಲಾರದಲ್ಲಿ ಬೆಳ್ಳಂಬೆಳಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರಾಜ್ಯಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದ 35 ಹೈಟೆಕ್ ಖಾಸಗಿ ಬಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಗಾಯಿತ್ರಿ ದೇವಿ ನೇತೃತ್ವದ ತಂಡ ಬುಧವಾರ ಮುಂಜಾನೆ 4 ಗಂಟೆಗೆ ಬೆಂಗಳೂರು-ಚನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿ ಆಲ್ ಇಂಡಿಯಾ ಪರ್ಮಿಟ್ ಪಡೆದು ರಾಜ್ಯದಲ್ಲಿ ಪರವಾನಿಗೆ ಇಲ್ಲದೆ ಸಂಚಾರ ಮಾಡುತ್ತಿದ್ದ ಐಷಾರಾಮಿ ಸ್ಲೀಪರ್ ಕೋಚ್ ಖಾಸಗಿ ಪ್ರವಾಸಿ ಬಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವಾಹನಗಳು ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿದ್ದು ಸಮರ್ಪಕವಾಗಿ ಹಾಗೂ ಸುಸ್ಥಿಯಲ್ಲಿ ಇಲ್ಲ, ಪ್ರಯಾಣಿಕರಿಗೆ ಸೂಕ್ತ ರಕ್ಷಣೆ ಇಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಲಾಯಿತು. ಈ ವಾಹನಗಳು ಲಕ್ಷಾಂತರ ರೂ. ತೆರಿಗೆ ಹಣ ಬಾಕಿ ಉಳಿಸಿಕೊಂಡಿದ್ದವು. ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಗಾಯಿತ್ರಿ ದೇವಿ ನೇತೃತ್ವದ 15 ಜನರ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ.

35ಕ್ಕೂ ಹೆಚ್ಚು ಐಷಾರಾಮಿ, ಸ್ಲೀಪರ್, ಹೈಟೆಕ್ ಬಸ್‌ಗಳ ಪರಿಶೀಲನೆ ಮಾಡಿ ಕೆಲವಕ್ಕೆ ದಂಡ ವಿಧಿಸಿದರೆ ಇನ್ನು ಕೆಲವನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಹನಗಳಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳ ಬದಲಿ ವ್ಯವಸ್ಥೆ ಮಾಡಿ ಕಳುಹಿಸಿದರು.

ಜಂಟಿ ಆಯುಕ್ತೆ ಗಾಯಾತ್ರಿ ದೇವಿ ಮಾತನಾಡಿ, ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ಪಡೆದು ರಾಜ್ಯದಲ್ಲಿ ಕೆಲ ಬಸ್‌ಗಳು ಓಡಾಟ ನಡೆಸುತ್ತಿದ್ದವು. ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಪಾವತಿಸದೆ ಬಸ್‌ಗಳನ್ನು ಚಲಾಯಿಸುತ್ತಿದ್ದರು. ನಮ್ಮ ರಾಜ್ಯದ ರಸ್ತೆ ಬಳಸುತ್ತಾರೆ, ಆದರೆ ತೆರಿಗೆ ಕಟ್ಟುತ್ತಿಲ್ಲ, ಕೆಲ ಬಸ್‌ಗಳು ಎಫ್‌ಸಿ ಕೂಡ ಮಾಡಿಸಿಲ್ಲ, ಇಂತಹ ವಾಹನಗಳ ವಿರುದ್ಧ ರಾಜ್ಯದ ಬಹುತೇಕ ಚೆಕ್ ಪೋಸ್ಟ್‌ಗಳಲ್ಲಿ ಪರಿಶೀಲನೆ ಆರಂಭಿಸಲಾಗಿದೆ ಎಂದರು.

ಅಪಘಾತದ ಸಂದರ್ಭದಲ್ಲಿ ಇರಬೇಕಾದ ಕನಿಷ್ಟ ಸೌಲಭ್ಯಗಳು ಈ ಪ್ರವಾಸಿ ಬಸ್‌ಗಳಲ್ಲಿ ಅಳವಡಿಸಿಲ್ಲ, ತುರ್ತು ನಿರ್ಗಮನ ದ್ವಾರಗಳು ನಿಯಮ ಬಾಹಿರವಾಗಿವೆ. ಅವಘಡದ ಸಂದರ್ಭಗಳಲ್ಲಿ ಬಳಕೆ ಮಾಡಬೇಕಾದ ಸುರಕ್ಷತಾ ವಸ್ತುಗಳನ್ನು ಇಟ್ಟಿಲ್ಲ, ಬಸ್ ಮಾಲೀಕರಿಗೆ ಕೇವಲ ಆದಾಯದ ಮೇಲೆ ಮಾತ್ರ ಗಮನವಿದ್ದು ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡುತ್ತಿಲ್ಲ ಎಂದು ಹೇಳಿದರು.

ಕಾರ್ಯಾಚರಣೆ ಮುಂದುವರಿಯಲಿದೆ, ನ್ಯಾಯಾಲಯದ ಆದೇಶ ಹೊರತುಪಡಿಸಿ ಉಳಿದಂತೆ ರಾಜ್ಯಕ್ಕೆ ಬರಬೇಕಾಗಿರುವ ಬಾಕಿ ತೆರಿಗೆ ವಸೂಲಿ ಮಾಡಲಾಗುವುದು ಎಂದು ಗಾಯತ್ರಿ ದೇವಿ ಹೇಳಿದರು.

Previous articleಅಂಬಿಕಾನಗರ ಕಾಳಿ ಹುಲಿ ಯೋಜನಾ ಪ್ರದೇಶದ ಗ್ರಾಮಸ್ಥರಿಗೆ ಉಚಿತ ನೇತ್ರ ಚಿಕಿತ್ಸೆ
Next articleಟ್ರಾಫಿಕ್‌ ಜಾಮ್: ವಾಹನ ಸಂಚಾರಕ್ಕೆ ಮೂರ್ನಾಲ್ಕು ಗಂಟೆ ಪರದಾಟ

LEAVE A REPLY

Please enter your comment!
Please enter your name here