ಅಯೋಧ್ಯೆ: ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಸಂಪನ್ನಗೊಂಡ ಸಂಕೇತವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂದಿರದ 191 ಅಡಿ ಗೋಪುರದ ಮೇಲೆ ಭಗವಾ ಧ್ವಜ ಹಾರಿಸಿದರು.
ಅಹಮದಾಬಾದ್‌ನಲ್ಲಿ ರಚಿಸಲಾದ ಧರ್ಮಧ್ವಜದಲ್ಲಿ ಸೂರ್ಯ, ಓಂ, ಮತ್ತು ಕೋವಿದಾರ ವೃಕ್ಷ ಚಿತ್ರಿಸಲಾಗಿದೆ. ತ್ರಿಕೋನಾಕಾರದಲ್ಲಿರುವ ಭಗವಾ ಧ್ವಜ 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿದ್ದು, ಗಂಟೆಗೆ 60 ಕಿ.ಮೀ ವೇಗದಲ್ಲಿ ಬೀಸುವ ಗಾಳಿ ತಡೆದುಕೊಳ್ಳುವ ಸಾಮರ್ಥ್ಯವಿದೆ. ಧ್ವಜದಲ್ಲಿ ಚಿತ್ರಿಸಿರುವ ಚಿಹ್ನೆಗಳಾದ ಕೋವಿದರ ವೃಕ್ಷವು ಕಶ್ಯಪ ಮಹರ್ಷಿಗಳು ರಚಿಸಿದ ಮಂದರ್ ಮತ್ತು ಪಾರಿಜಾತ ಮರಗಳ ಮಿಶ್ರತಳಿಯನ್ನು ಪ್ರದರ್ಶಿಸುತ್ತದೆ. ಸೂರ್ಯನು ಭಗವಾನ್ ಶ್ರೀರಾಮನ ಸೂರ್ಯವಂಶವನ್ನು ಪ್ರತಿನಿಧಿಸುತ್ತಾನೆ ಹಾಗೂ ಓಂ ಹಿಂದೂ ಧರ್ಮದ ಶಾಶ್ವತ ಆಧ್ಯಾತ್ಮಿಕ ಸಂಕೇತವಾಗಿದೆ.























