ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ತೀವ್ರ ಸ್ವರೂಪದಲ್ಲಿ ನಡೆಯುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಅಧಿಕಾರದ ಗದ್ದುಗೆಗೆ ಏರುವ ಪ್ರಯತ್ನದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಸೋಮವಾರ ಸದಾಶಿವನಗರದ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಉತ್ತರ ಪ್ರದೇಶದ ನಾಗಾಸಾಧುಗಳು ಅವರನ್ನು ಭೇಟಿ ಮಾಡಿ ಆಶೀರ್ವಾದ ಮಾಡಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಧುವೊಬ್ಬರು `ನಾವು ಕಾಶಿಯಿಂದ ಬಂದಿದ್ದೇವೆ. ಡಿಕೆ ಶಿವಕುಮಾರ್ ಅವರಿಗೆ ಆಶೀರ್ವಾದ ಮಾಡಿದ್ದೇವೆ. ಅವರಿಗೆ ಹಾಗೂ ಅವರ ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದೇವೆ. ಅಲ್ಲದೆ, ಅವರು ಮುಖ್ಯಮಂತ್ರಿ ಆಗಲಿ ಎಂದೂ ಆಶೀರ್ವಾದ ಮಾಡಿದ್ದೇವೆ’ ಎಂದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಈ ಬೆಳವಣಿಗೆ ಸಹಜವಾಗಿ ರಾಜಕೀಯ ಗಮನ ಸೆಳೆಯಯತ್ತಿದೆ. ಆರ್. ಅಶೋಕ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು `ಡಿಕೆಶಿ ಜೋತಿಷ್ಯ ನಂಬುತ್ತಾರೆ. ದೆಹಲಿ, ಖರ್ಗೆ ನಿವಾಸ ಎಲ್ಲಾ ಅಲೆದಾಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಬೆಳವಣಿಗೆ ನಡೆಯುತ್ತಿರುವುದು ಸ್ಪಷ್ಟ’ ಎಂದರು.


























