ವಿಜಯಪುರ: ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ನಿರ್ಣಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಂದರೆ ಅವರನ್ನು ನಾಮ್‌ಕೆ ವಾಸ್ತೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ದಲಿತ ಬಾಂಧವರನ್ನು ಕೇವಲ ಗುಲಾಮರನ್ನಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ ಹೊರತು ಅವರನ್ನು ಎಂದೂ ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರೇ ಕಾಂಗ್ರೆಸ್ ಹೈಕಮಾಂಡ್ ಎಂದು ನಾವು ತಿಳಿದಿದ್ದೆವು, ಆದರೆ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ನಿರ್ಣಯ ಎಂದು ಖರ್ಗೆ ಅವರೇ ಹೇಳಿದ್ದಾರೆ. ಎಲ್ಲ ಅಧಿಕಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಲ್ಲಿ ಕೇಂದ್ರೀಕೃತವಾಗಿದೆ. ದಲಿತ ನಾಯಕರಿಗೆ ಅವರು ಜವಾಬ್ದಾರಿ ನೀಡುವುದಿಲ್ಲ. ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ. ಹೀಗಾಗಿ ದಲಿತ ಬಾಂಧವರು ಅವರನ್ನು ಬಿಟ್ಟು ಹೊರಬರಬೇಕು ಎಂದರು.
ಕುದುರೆ ವ್ಯಾಪಾರವಂತೂ ಭರ್ಜರಿಯಾಗಿ ನಡೆಯುತ್ತಿದೆ, 50 ಕೋಟಿ, 75 ಕೋಟಿ ರೂ. ಅಷ್ಟೇ ಅಲ್ಲ ಕೆಲವು ಶಾಸಕರಿಗೆ 100 ಕೋಟಿ ರೂ. ಆಫರ್ ನೀಡಲಾಗುತ್ತಿದೆಯಂತೆ. ಆದರೆ ಬಿಜೆಪಿ ಯಾವ ಕಾರಣಕ್ಕೂ ಸರ್ಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.


























