ದಾವಣಗೆರೆ: ರೈತರಿಗಾಗಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ ಅಂದ್ರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಶಾಸಕರ ಖರೀದಿ ಕೇಂದ್ರ ತೆರೆದಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ನಮ್ಮ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಲೇವಡಿ ಮಾಡಿದರು.
ದಾವಣಗೆರೆಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತೊಗರಿ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ ಮತ್ತು ಕಬ್ಬಿಗೆ ನಿಗದಿತ ಬೆಲೆ ನಿಗದಿ ಮಾಡಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ನಾವು ಸಲಹೆ ನೀಡಿದರೆ ಇವರು ಶಾಸಕರ ಖರೀದಿ ಕೇಂದ್ರ ತೆರೆದು, ಶಾಸಕರಿಗೆ ಬೆಲೆ ನಿಗದಿ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಮೆಟಿರಿಯಲ್ ಮೇಲೆ ನಿರ್ಧಾರವಾಗುತ್ತೆ ಒಳ್ಳೇ ಗುಣಮಟ್ಟದ್ದಾಗಿದ್ದರೆ ರೇಟ್ ಜಾಸ್ತಿ, ಜೊಳ್ಳುಪೊಳ್ಳು ಇದ್ದರೆ ದರ ಕಡಿಮೆ ಹೀಗೆ ಶಾಸಕರ ಗ್ರೇಡ್ ನೋಡಿಕೊಂಡು ದರ ನಿಗದಿ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಛೇಡಿಸಿದರು.
ಸರ್ಕಾರ ಬದುಕಿದ್ದು ಸತ್ತಂತೆ ಆಗಬಾರದು, ಈಗಾಗಲೇ ಈ ಸರ್ಕಾರ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ನೀವು ರೈತರ ಬದುಕಿನ ಜತೆಗೆ ಚೆಲ್ಲಾಟವಾಡಬೇಡಿ, ತಕ್ಷಣ ಖರೀದಿ ಕೇಂದ್ರ ತೆರೆಯಿರಿ. ನಿಮಗೆ ನೀವೆ ಮಾಡಿರುವ ಶಾಸನ ಅನುಷ್ಠಾನಗೊಳಿಸದಿದ್ದರೆ ಕುರ್ಚಿಗೇಕೆ ಕಾದಾಟ ಮಾಡುತ್ತೀರಿ? ಕುರ್ಚಿಯಲ್ಲಿ ಕೂತು ಪ್ರಯೋಜನವೇನು? ಭ್ರಷ್ಟಾಚಾರವೇ ನಿಮ್ಮ ಸಾಧನೆ ಎಂದು ಟೀಕಿಸಿದರು.

























